ಪ್ರಮುಖ ಸುದ್ದಿಮೈಸೂರು

ಅಖಿಲ ಭಾರತ ಸಂಯೋಜಿತ ಆನೆ ಸಂಖ್ಯಾ ಅಂದಾಜು 2017ಕ್ಕೆ ಚಾಲನೆ

ಪ್ರಮುಖಸುದ್ದಿ, ಮೈಸೂರು ಮೇ.16:-  ಕರ್ನಾಟಕ ಅರಣ್ಯ ಇಲಾಖೆಯು ರಾಜ್ಯದಲ್ಲಿ ಏಕಕಾಲದಲ್ಲಿ ಏಕಕಾಲಿಕ ಆನೆಗಣತಿಯನ್ನು ಮೇ.2017ರಲ್ಲಿ ಕ್ಷೇತ್ರ ಎಣಿಕೆ, ಲೈನ್ ಟ್ರಾನ್ಸೆಕ್ಟ್ ಎಣಿಕೆ ಮತ್ತು ನೀರಿನ ಹಳ್ಳ ವಿಧಾನಗಳ ಮೂಲಕ ನಡೆಸುತ್ತಿದೆ.

ಆನೆಗಳು ಭಾರತದಲ್ಲಿನ ವಿವಿಧ ರಾಜ್ಯಗಳ ಭೂಪ್ರದೇಶಗಳಲ್ಲಿ ವ್ಯಾಪಿಸಿರುವುದರಿಂದ ಹಾಗೂ ಅವುಗಳು ಒಂದು ರಾಜ್ಯದ ಗಡಿಯಿಂದ ಇನ್ನೊಂದು ರಾಜ್ಯಕ್ಕೆ ಯಥೇಚ್ಛವಾಗಿ ಚಲಿಸುವುದರಿಂದ ಅಂದಾಜಿನಲ್ಲಿ ಉದ್ಭವಿಸಬಹುದಾದ ದೋಷಗಳನ್ನು ಕಡಿಮೆಗೊಳಿಸುವ ಸಲುವಾಗಿ  ಉತ್ತರಪ್ರದೇಶ ಮತ್ತು ಉತ್ತರಾಖಂಡ್, ಜಾರ್ಖಂಡ್, ಓಡಿಶಾ, ದಕ್ಷಿಣ ಬಂಗಾಳ, ಛತ್ತೀಸ್ ಗಡ, ಅಸ್ಸಾಂ, ಅರುಣಾಚಲಪ್ರದೇಶ, ಉತ್ತರಬಂಗಾಳ, ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಏಕಕಾಲಕ್ಕೆ ಆನೆಗಣತಿ ನಡೆಸಲಾಗುತ್ತಿದೆ.

ಪ್ರತಿ ಐದು ವರ್ಷಕ್ಕೊಮ್ಮೆ ಆನೆಗಣತಿ ನಡೆಯಲಿದ್ದು, ಆನೆ ಎಣಿಕೆ ಕಾರ್ಯವನ್ನು ದೇಶಾದ್ಯಂತ ರಾಜ್ಯಗಳಲ್ಲಿನ ಅರಣ್ಯ ಇಲಾಖೆ ನಡೆಸಲಿದೆ. ಮಂಗಳವಾರ ಆನೆ ಗಣತಿಗೆ ಬಂಡೀಪುರ ಅರಣ್ಯಪ್ರದೇಶದಲ್ಲಿ ಚಾಲನೆ ದೊರಕಿದ್ದು, ಸ್ವಯಂಸೇವಕರಿಗೆ ತರಬೇತಿ ನೀಡಲಾಗಿದೆ. ಈಗಾಗಲೇ ಸ್ವಯಂಸೇವಕರಿಗೆ ತರಬೇತಿ ನೀಡಲಾಗಿದ್ದು, ಹೊಸದಾಗಿ ಸೇರ್ಪಡೆಗೊಂಡವರಿಗೆ ತರಬೇತಿ ನೀಡಲಾಯಿತು.

ಗೋಪಾಲಸ್ವಾಮಿ ಬೆಟ್ಟ, ಎನ್.ಬೇಗೂರು, ಗುಂಡ್ರೆ, ಎಡಿಯಾಲ, ಎ.ಎಂ.ಗುಡಿ ಇನ್ನಿತರೇ ಅರಣ್ಯಪ್ರದೇಶಗಳಲ್ಲಿ ಆನೆಗಣತಿ ನಡೆಯಲಿದೆ. ಆನ್ ಲೈನ್ ನಲ್ಲಿ 110 ಮಂದಿ  ಸ್ವಯಂ ಸೇವಕರು ಹೆಸರನ್ನು ನೋಂದಾಯಿಸಿಕೊಂಡಿದ್ದು, ನಂತರ ತಂಡಗಳನ್ನು ಚೀಟಿ ಎತ್ತುವ ಮೂಲಕ ರಚಿಸಲಾಯಿತು. ಆದರೆ 110 ಮಂದಿ ನೋಂದಣಿಯಲ್ಲಿ 50ರಷ್ಟು ಜನ ಸ್ಥಳದಲ್ಲಿ ಹಾಜರಾಗದೇ ಇರುವುದರಿಂದ ತಂಡ ರಚಿಸಲು ಅಧಿಕಾರಿಗಳಿಗೆ ಗೊಂದಲವುಂಟಾಯಿತು. ಇನ್ನೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿಷಯಗಳನ್ನರಿತು ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಕ್ಕೆ ಹಿರಿಯ ಅಧಿಕಾರಿಗಳು ಪರವಾನಿಗೆ ಯಾಚಿಸಿ ಅಭ್ಯರ್ಥಿಗಳ ಬೇಡಿಕೆಗಳನ್ನು ಪರಿಗಣಿಸಿ ಸುಮಾರು 20ಕ್ಕೂ ಅಧಿಕ ಸೇವಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಿದರು. ವನ್ಯಜೀವಿ ತಜ್ಞರಾದ ರಾಜಕುಮಾರ್, ಚೇತನ್, ಸುಭದ್ರ, ಸೇರಿದಂತೆ 11ಮಂದಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದಾರೆ. ಸ್ವಯಂಸೇವಕರಾಗಿ ನೋಂದಾಯಿಸಿಕೊಂಡವರಲ್ಲಿ ಇಂಜಿನಿಯರುಗಳು, ಅಸಿಸ್ಟೆಂಟ್ ಪ್ರೊಫೆಸರ್ ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಈ ಸಂದರ್ಭ , ಸಿಎಫ್ ಟಿ.ಹರಿಲಾಲ್ ಮಾತನಾಡಿ ಎಲ್ಲ ಸ್ವಯಂ ಸೇವಕರಿಗೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಗಣತಿಯ ಕುರಿತು, ಮಾದರಿ ಕ್ಷೇತ್ರಗಳ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿಗಳು,ಆನೆಗಳ ವಯಸ್ಸು ಮತ್ತು ಬೆಳವಣಿಗೆಗಳ ಮಾನದಂಡ, ಮಾದರಿ ಕ್ಷೇತ್ರ ಎಣಿಕೆ, ಪರಿಶೋಧನಾತ್ಮಕ ಮತ್ತು ಲದ್ದಿ ಎಣಿಕೆ ವಿಧಾನ, ಡಾಟಾಶೀಟ್ ಗಳ ಕುರಿತು ವಿವರಿಸಿದರು.

ಮಂಗಳವಾರ ನಡೆದ ಅಖಿಲ ಭಾರತ ಸಂಯೋಜಿತ ಆನೆ ಸಂಖ್ಯಾ ಅಂದಾಜು 2017ರಲ್ಲಿ ಐಜಿಎಫ್, ಶ್ರೀವಾತ್ಸವ್, ಎಪಿಸಿಸಿಎಫ್ ದಿಲೀಪ್ ಕುಮಾರ್ ದಾಸ್, ಸಿಎಫ್ ಟಿ.ಹರಿಲಾಲ್, ಎಸಿಎಫ್ ಪೂವಯ್ಯ, ಪ್ರೊಬೆಷನರಿ ಎಸಿಎಫ್ ಆ್ಯಂಟೋನಿ ಮರಿಯಪ್ಪ ಉಪಸ್ಥಿತರಿದ್ದರು. – (ವರದಿ: ಜಿ.ಕೆ,ಎಸ್.ಎಚ್)

Leave a Reply

comments

Related Articles

error: