ಮೈಸೂರು

ಮೇ.19-21 ನಗರದಲ್ಲಿ ರಾಜ್ಯ ಮಟ್ಟದ ವೈದ್ಯಕೀಯ ಸಮ್ಮೇಳನ ಕೆಪಿಕಾನ್ -2017

ಮೈಸೂರು.ಮೇ.17 : ಅಸೋಸಿಯೇಷನ್ ಆಫ್ ಫಿಸಿಷಿಯನ್ ಆಫ್ ಇಂಡಿಯಾ ವತಿಯಿಂದ ರಾಜ್ಯ ಮಟ್ಟದ ವೈದ್ಯಕೀಯ ಸಮ್ಮೇಳನ ‘ಕೆಪಿಕಾನ್-2017’ ಅನ್ನು ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಕೆಪಿಕಾನ್ ಕಾರ್ಯಕಾರಿಣಿ ಸಮಿತಿ ಅಧ್ಯಕ್ಷ ಹಾಗೂ ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಸವನಗೌಡಪ್ಪ ತಿಳಿಸಿದರು.

ಬುಧವಾರ, ಪತ್ರಕರ್ತರ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು  ಮೇ.19 ರಿಂದ 21ರವರೆಗೆ ಮೂರು ದಿನಗಳ ಕಾಲ, ಜೆ.ಎಸ್.ಎಸ್. ವೈದ್ಯಕೀಯ ವಿದ್ಯಾಲಯದ ಶ್ರೀರಾಜೇಂದ್ರ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಸಮ್ಮೇಳನವನ್ನು ಮೇ.19ರಂದು ಬೆಳಿಗ್ಗೆ 10ಕ್ಕೆ ಸಮ್ಮೇಳನದ ಶೈಕ್ಷಣಿಕ ಕಾರ್ಯಕ್ರಮವನ್ನು ಡಾ.ಆರ್ಮುಗಮ್ ಮುರುಗನಾಥನ್  ಮತ್ತು ಗರ್ವನರ್ ಆಫ್ ಅಮೇರಿಕನ್ ಕಾಲೇಜ್ ಆಫ್ ಫಿಸಿಷಿಯನ್ ಇಂಡಿಯಾ ಚಾಪ್ಟರ್ನ ಡಾ.ಬಿ.ಎಸ್.ನಾಗರಾಜು ಇವರುಗಳು ಚಾಲನೆ ನೀಡುವರು. ಮುಡಾ ಆಯುಕ್ತ ಡಾ.ಮಹೇಶ್ ಔಷಧ ಮಳಿಗೆಗಳನ್ನು ಉದ್ಘಾಟಿಸುವರು.

ವೈದ್ಯಕೀಯ ಸಮ್ಮೇಳನಕ್ಕೆ ಅದೇ ದಿನ ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಚಾಲನೆ ನೀಡುವರು. ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸುವರು. ಡಾ.ಕೆ.ಆರ್.ರವಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಎಪಿಐನ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಡಾ.ಕೆ.ಆರ್.ರವೀಂದ್ರ, ಡಾ.ಎಂ.ಪ್ರೇಮನಾಥ್, ಡಾ.ಎಂ.ರವಿ ಕೀರ್ತಿ, ಡಾ. ಹೆಚ್.ಎಸ್. ಪ್ರಸನ್ನ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಮೇ.21ರಂದು ಮಧ್ಯಾಹ್ನ 2ಕ್ಕೆ ನಡೆಯುವ ಸಮಾರೋಪದ ಮುಖ್ಯ ಅತಿಥಿಯಾಗಿ ಪೊಲೀಸ್ ಕಮಿಷನರ್ ಡಾ.ಎ.ಸುಬ್ರಮಣ್ಯೇಶ್ವರ ರಾವ್ ಮತ್ತು ಉಪಕುಲಪತಿ ಬಿ.ಸುರೇಶ್ ಇವರುಗಳು ಪಾಲ್ಗೊಳ್ಳುವರು.

ಗ್ರಾಮೀಣ ವಿಭಾಗದಲ್ಲಿ ರೋಗಿಗಳ ಉತ್ತಮ ಆರೈಕೆ ಎನ್ನುವ ಧೇಯದೊಂದಿಗೆ ಆಯೋಜಿಸಲಾಗಿರುವ  ಸಮ್ಮೇಳನದ ವಿಚಾರ ಸಂಕಿರಣದಲ್ಲಿ ದೇಶ ವಿದೇಶಗಳ 50ಕ್ಕೂ ಹೆಚ್ಚು ನುರಿತ ತಜ್ಞ ವೈದ್ಯರು ವಿಷಯ ಮಂಡಿಸುವರು. ದೇಶಾದ್ಯಂತ 1500ಕ್ಕೂ ಹೆಚ್ಚು ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ರೋಗಿಗಳ ಆರೋಗ್ಯವನ್ನು ಪರಿಣಾಮಕಾರಿಯಾಗಿ ಸುಧಾರಿಸಲು ಮತ್ತು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವುದೇ ಸಮ್ಮೇಳನದ ಧ್ಯೇಯವಾಗಿದೆ. ವೈದ್ಯಕೀಯ ರಂಗದ ತೀವ್ರಗತಿಯ ಬದಲಾವಣೆ, ರೋಗಿಗಳ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಸಮ್ಮೇಳನ ಮಹತ್ವದ ಪಾತ್ರ ವಹಿಸುವುದು ಎಂದರು.

ಸಮ್ಮೇಳನವನ್ನು ಮೈಸೂರು ಅಸೋಸಿಯೇಷನ್ ಆಫ್ ಫಿಸಿಷಿಯನ್ ವಿಭಾಗ, ಜೆ.ಎಸ್.ಎಸ್ ವೈದ್ಯಕೀಯ ಕಾಲೇಜು ಮತ್ತು ಮೈಸೂರು ವೈದ್ಯಕೀಯ ವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದೆ.  ಸುದ್ದಿಗೋಷ್ಠಿಯಲ್ಲಿ ಕೆಪಿಕಾನ್ ಕಾರ್ಯದರ್ಶಿ ಡಾ.ಬಿ.ಜೆ.ಸುಭಾಶ್ ಚಂದ್ರ, ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನ ಖಜಾಂಚಿ ಡಾ.ಕೆ.ಎಂ.ಶ್ರೀನಾಥ್, ಜಂಟಿ ಕಾರ್ಯದರ್ಶಿ .ಕೆ.ಸಿ.ಶಶಿಧರ್ ಹಾಗೂ ಉಪಾಧ್ಯಕ್ಷರಾದ ಮೈಸೂರು ಮೆಡಿಕಲ್ ಕಾಲೇಜಿನ ಡಾ.ರವಿಶಂಕರ್ ಹಾಗೂ ಡಾ.ಶ್ರೀನಿವಾಸ ಉಪಸ್ಥಿತರಿದ್ದರು. –(ವರದಿ :ಕೆ.ಎಂ.ಆರ್,ಎಸ್.ಎಚ್)

Leave a Reply

comments

Related Articles

error: