ಕರ್ನಾಟಕಪ್ರಮುಖ ಸುದ್ದಿ

ವಿದ್ಯಾರ್ಥಿಗಳಿಗೆ ಭತ್ತ ನಾಟಿಯ ಪಾಠ, ನೇಜಿ ಪರ್ಬದ ಹೆಸರಲ್ಲಿ ಕೆಸರಿನ ಆಟ

ರಾಜ್ಯ(ದಕ್ಷಿಣ ಕನ್ನಡ),ಆ.08 : ನಿತ್ಯ ನಾಲ್ಕು ಗೋಡೆಗಳ ಮಧ್ಯೆ ಪಾಠ. ಆಟ-ಪಾಠದ ಹೊರತು ಸಾಮಾಜಿಕ ತಾಣಗಳಲ್ಲೇ ಕಾಲ ಕಳೆಯುವ ಪರಿಪಾಠ. ಇದನ್ನೆಲ್ಲಾ ಬಿಟ್ಟು ಕಾಲೇಜು ವಿದ್ಯಾರ್ಥಿಗಳಿಗೆ ಹಳ್ಳಿಯ ಬದುಕು, ಕೃಷಿ ಸಂಸ್ಕೃತಿ, ಗದ್ದೆ-ಕೆಸರು, ಹೀಗೆ ರೈತನ ಬದುಕಿನ ಹತ್ತಾರು ಆಯಾಮಗಳನ್ನು ತೆರೆದಿಟ್ಟು ಮಣ್ಣಿನ ಮಕ್ಕಳಿಂದಲೇ ಪಾಠ ಹೇಳಿಸೋ ವಿಭಿನ್ನ ಕಾರ್ಯವೊಂದು ದ.ಕನ್ನಡ  ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದಲ್ಲಿ ನಡೆದಿದೆ.

ತಂತ್ರಜ್ಞಾನದ ಯುಗಕ್ಕೆ ಅಂಟಿಕೊಂಡಿರೋ ಮಕ್ಕಳು ಇಂಟರ್ ನೆಟ್, ಫೇಸ್ ಬುಕ್ ಗಳಲ್ಲಿ ಮುಳುಗಿ ನಮ್ಮ ಸಂಸ್ಕೃತಿ ಮತ್ತು ಜೀವನ ಕ್ರಮಗಳನ್ನೇ ಮರೆಯುತ್ತಿದ್ದಾರೆ. ಅಂಥ ವಿದ್ಯಾರ್ಥಿಗಳಿಗೆ ಮತ್ತೆ ಈ ಮಣ್ಣಿನ ಸತ್ವ ಮತ್ತು ತತ್ವಗಳನ್ನು ಕಲಿಸಿಕೊಡೋ ಕೆಲಸವನ್ನ ಬಂಟ್ವಾಳ ತಾಲೂಕಿನ ಮದ್ದ ಗ್ರಾಮದ ಶಿವಾಜಿ ಬಳಗ (ರಿ) ಮತ್ತು ಶಿವಾಜಿ ಮಾತೃ ಸೇವಾ ಟ್ರಸ್ಟ್ ಹಮ್ಮಿಕೊಂಡಿತ್ತು.

ವಾಮದಪದವಿನ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕೊಡಂಬೆಟ್ಟು ಗ್ರಾಮದ ಪೆರಿಯಾವುಗುತ್ತು ರಮೇಶ್ ಗಟ್ಟಿಯವರ ಕಂಬಳ ಗದ್ದೆಯಲ್ಲಿ ಭತ್ತ ನಾಟಿಯ ಪಾಠ ಮಾಡಲಾಯ್ತು. ‌’ನೇಜಿ ಪರ್ಬ’ ಅನ್ನೋ ಹೆಸರಿನ ಈ ಕೃಷಿ ಹಬ್ಬದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳು ಗದ್ದೆಗಿಳಿದು ನೇಜಿ ನೆಟ್ಟು ಮಣ್ಣಿನ ಮಕ್ಕಳಾದರು. ಆದರೆ ಈ ಬಾರಿ ಇವರಿಗೆ ಶಿಕ್ಷಕರಾಗಿದ್ದು ಮಾತ್ರ ಸ್ಥಳೀಯ ಕೃಷಿಕರು ಮತ್ತು ನಿತ್ಯ ಭತ್ತದ ಗದ್ದೆಯಲ್ಲೇ ಕಳೆಯುವ ತಾಯಂದಿರು.

ಆಟಿ ತಿಂಗಳಲ್ಲಿ ತುಳುನಾಡಿನ ಭತ್ತದ ಗದ್ದೆಗಳು ಹೊಸ ಚೈತನ್ಯ ಪಡೆದುಕೊಳ್ಳುವ ಹೊತ್ತು. ಸಹಜವಾಗಿಯೇ ಈ ಭಾಗದಲ್ಲಿ ಮಳೆ ಬಿರುಸುಗೊಂಡು ಕೃಷಿ ಮತ್ತಷ್ಟು ವೇಗ ಪಡೆದುಕೊಳ್ಳುವ ಕಾಲ. ಹೀಗಾಗಿ ಇದೇ ಹೊತ್ತಲ್ಲಿ ಕಾಲೇಜು ವಿದ್ಯಾರ್ಥಿಗಳನ್ನ ಗದ್ದೆಗಿಳಿಸುವ ಶಿವಾಜಿ ಬಳಗದ ಪರಿಕಲ್ಪನೆ ಯಶಸ್ವಿಯಾಗಿದೆ. ಉಳುಮೆ ಮಾಡಿ ಮೊದಲೇ ಸಿದ್ದವಾಗಿದ್ದ ಗದ್ದೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿವಾಜಿ ಬಳಗದ ಸದಸ್ಯರು ನೇಜಿ ನೆಟ್ಟು ಸಂಭ್ರಮಿಸಿದ್ದಾರೆ.

ಕೃಷಿ ಕಾರ್ಯಕ್ಕೆ ಎಲ್ಲರೂ ಬೆನ್ನು ಹಾಕುವ ಹೊತ್ತಲ್ಲಿ ಸುರಿಯೋ ಮಳೆಯ ಮಧ್ಯೆಯೇ ವಿದ್ಯಾರ್ಥಿಗಳು ನೇಜಿ ನೆಟ್ಟರು. ಭತ್ತದ ಪೈರುಗಳನ್ನ ಹಿಡಿಯೋದು ಹೇಗೆ, ನಾಟಿ ಮಾಡೋದು ಹೇಗೆ, ಭತ್ತದ ಗದ್ದೆಯ ಮಣ್ಣಿನ ಗುಣಗಳ ಬಗ್ಗೆ ಕೃಷಿಕರಿಂದ ಅರಿತುಕೊಂಡರು. ಪಠ್ಯದ ಆಚೆಗೆ ಕೆಸರಿನ ಗದ್ದೆಯಲ್ಲಿ ತೆರೆದುಕೊಂಡ ಹೊಸ ಜಗತ್ತು ರಜಾ ದಿನದಲ್ಲಿ‌ ವಿದ್ಯಾರ್ಥಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ.(ಎಸ್.ಎಂ)

Leave a Reply

comments

Related Articles

error: