ಕರ್ನಾಟಕಪ್ರಮುಖ ಸುದ್ದಿ

ಯುಜಿಸಿ-ನೆಟ್/ಕೆ-ಸೆಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ

ರಾಜ್ಯ (ದಾವಣಗೆರೆ) ಆ.9:- ಸಮಕಾಲೀನ ಸಂದರ್ಭಗಳಲ್ಲಿ ಶೈಕ್ಷಣಿಕ ಪ್ರಪಂಚದ ನೀರೀಕ್ಷೆಗಳು ಹೆಚ್ಚು ವಿಸ್ತಾರವಾಗುತ್ತಿವೆ. ಅಧ್ಯಾಪಕರು ನಿರಂತರವಾದ ಹುಡುಕಾಟದಲ್ಲಿ ತೊಡಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕಿ, ಚಿಂತಕಿ ಪ್ರೊ. ಆರ್. ಇಂದಿರಾ ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ 45 ದಿನಗಳ ಕಾಲದ ಯುಜಿಸಿ-ನೆಟ್/ಕೆ-ಸೆಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬೋಧನೆ-ಸಂಶೋಧನೆಗಳನ್ನು ಬಹುಶಿಸ್ತೀಯ ದೃಷ್ಟಿಕೋನದಿಂದ ಅರ್ಥೈಸುವ ಶಕ್ತಿಯನ್ನು ಅಧ್ಯಾಪಕರು ಬೆಳೆಸಿಕೊಳ್ಳಬೇಕು. ಇಂದು ಜ್ಞಾನದ ಮೂಲಗಳು ಹೆಚ್ಚಿವೆ, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವಕಾಶಗಳೂ ಹೆಚ್ಚಿವೆ. ಅಧ್ಯಾಪಕರು, ವಿದ್ಯಾರ್ಥಿಗಳಲ್ಲಿ ತಾವು ತರಗತಿಗಳಲ್ಲಿ ಪಡೆದ ಜ್ಞಾನವನ್ನು ಬದುಕಿನ ವಾಸ್ತವಗಳಿಗೆ ಅನ್ವಯಿಸುವ ಸಾಮಥ್ರ್ಯವನ್ನು ಬೆಳೆಸಬೇಕು. ಜ್ಞಾನಾರ್ಜನೆಯನ್ನು ತರಗತಿಗಳಿಗೆ ಮಾತ್ರ ಸೀಮಿತಗೊಳಿಸದೆ ಹೊರ ಪ್ರಪಂಚದ ಅರಿವು ಹಾಗೂ ಅನುಭವಗಳನ್ನು ಅಧ್ಯಾಪಕರು ವಿದ್ಯಾರ್ಥಿಗಳಿಗೆ ನೀಡುವಂತಾಗಬೇಕು ಎಂದರು. ನಿಜವಾದ ಒಳ್ಳೆ ಮೇಷ್ಟ್ರು ಅಂದರೆ, ನನಗೆ ಗೊತ್ತಿರೋದನ್ನೇ ಹೇಳ್ತಿನಿ ಅದನ್ನೇ ಸ್ವೀಕಾರ ಮಾಡಬೇಕು ಅಂತ ತಿಳಿದುಕೊಳ್ಳದೆ, ನನಗೆ ಗೊತ್ತಿಲ್ಲದೇ ಇರೋದು ವಿದ್ಯಾರ್ಥಿಗಳಿಗೆ ಗೊತ್ತಿರಬಹುದು ಅಂತ ತಿಳಿದುಕೊಂಡು ಬೋಧಿಸುವುದು ಒಳ್ಳೆಯ ಮೇಸ್ಟ್ರ ಮೊದಲ ಲಕ್ಷಣ ಎಂದರು.
ಬೋಧನಾ ವಿಷಯದಲ್ಲಿ ಪರಿಣಿತ ಜ್ಞಾನವಿದ್ದರೆ ಸಾಲದು, ಒಂದು ಕಾಲದಲ್ಲಿ ನನ್ನ ಸಬ್ಜೆಕ್ಟ್ ಏನಿದೆ ಅದರಲ್ಲಿ ಪರಿಣಿತಿ ಹೊಂದಿದರೆ ಸಾಕು ಅಂತ ಇದ್ದರು. ಆದರೆ ಇಂದು ಇಂಟರ್ ನ್ಯಾಷನಲ್ ಅಕಾಡೆಮಿಕ್ ಸ್ಟ್ಯಾಂಡರ್ಡ್ ಪ್ರಕಾರ ಶಿಕ್ಷಕರ ಗುಣಮಟ್ಟವನ್ನು ಅಳೆಯುವುದು ಬೇರೆ ಬೇರೆ ವಿಷಯಗಳಲ್ಲಿ ಯಾವ ರೀತಿ ಜ್ಞಾನವನ್ನು ಹೊಂದಿದ್ದಾರೆ ಎಂಬುದರ ಮೌಲ್ಯಮಾಪನವೇ ಈ ಪರೀಕ್ಷೆಗಳು ಎಂದು ವಿವರಿಸಿದರು.
ಮುಕ್ತಭಂಡಾರ ಅಧ್ಯಯನ ಪುಸ್ತಕವನ್ನು ಕರಾಮುವಿ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ ಬಿಡುಗಡೆ ಮಾಡಿ ತಿಳಿಯದ ವಿಷಯದೆಡೆಗೆ ಶಿಬಿರಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕು ಎಂದ ಅವರು ತಾವು ಯುಜಿಸಿ-ನೆಟ್ ಪರೀಕ್ಷೆಯನ್ನು ಎದುರಿಸಿದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರ ಕುಲಸಚಿವ ಡಾ. ಎ. ಖಾದರ್ ಪಾಷ ಅವರು ಯುಜಿಸಿ ನೆಟ್ ಹಾಗೂ ಕೆ-ಸೆಟ್ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳು ತಾವು ತೆಗೆದುಕೊಳ್ಳುವ ಐಚ್ಛಿಕ ವಿಷಯದ ಜೊತೆಗೆ ಬೇಸಿಕ್ ಫಂಡಮೆಂಟಲ್ಸ್ ಬಗ್ಗೆ ಸಂಪೂರ್ಣ ತಿಳಿದಿರಬೇಕು ಆಗಿದ್ದಾಗ ಮಾತ್ರ ಅದನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ಪ್ರೊ. ಕಾಂಬ್ಳೆ ಅಶೋಕ್, ಅಧ್ಯಯನ ಡೀನ್ ಪ್ರೊ. ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಬಿ. ಗಣೇಶ್ ಕೆ.ಜಿ. ಕೊಪ್ಪಲ್, ಸಿದ್ದೇಶ್ ಹೊನ್ನೂರ್ ಭಾಗವಹಿಸಿದ್ದರು. (ಜಿ. ಕೆ, ಎಸ್. ಎಚ್)

Leave a Reply

comments

Related Articles

error: