ಮೈಸೂರು

ರೋಟರಿ ಐವರಿ ಸಿಟಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

ಮೈಸೂರು, ಆ.8:- ನಗರದ ರೋಟರಿ ಐವರಿ ಸಿಟಿ ವತಿಯಿಂದ ಇಂದು ಶ್ರೀ ವಿವೇಕಾನಂದ ಸೇವಾಶ್ರಮದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಾರ್ಡ್ ವೀಕ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ವಿವೇಕಾನಂದ ಸೇವಾಶ್ರಮದ ಮೈಸೂರು ವಿಭಾಗದ ಮುಖ್ಯಸ್ಥ ಎನ್.ಸೇತುರಾಂ ಅವರು ಮನುಷ್ಯನಿಗೆ ಎಲ್ಲಾ ಅಂಗಾಂಗಗಳಲ್ಲಿಯೂ ಬಹಳ ಮುಖ್ಯವಾದ ಅಂಗ ನೇತ್ರ. ನೇತ್ರದಾನ ಮಹಾದಾನ. ನೇತ್ರದಾನ ಮಾಡುವುದರಿಂದ ಒಬ್ಬನ ಬಾಳಿಗೆ ಬೆಳಕನ್ನು ನೀಡಿದಂತಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಆಗಿಂದ್ದಾಗ್ಗೆ ತಮ್ಮ ಕಣ್ಣುಗಳನ್ನು ನೇತ್ರತಜ್ಞರ ಮೂಲಕ ತಪಾಸಣೆಗೊಳಿಸುತ್ತಿರಬೇಕು. ಏಕೆಂದರೆ, ದೃಷ್ಟಿ ಮಂದವಿದ್ದಲ್ಲಿ ದೃಷ್ಟಿಯನ್ನು ಸರಿ ಮಾಡಿ, ಕಣ್ಣು ಸ್ಪಷ್ಟತೆಯಿಂದ ಕೂಡಿರಲು ಸಹಾಯವಾಗುತ್ತದೆ.
ಈಗಾಗಲೇ ಶ್ರೀ ವಿವೇಕಾನಂದ ಸೇವಾಶ್ರಮದ ವತಿಯಿಂದ 10 ಸಾವಿರ ಮಕ್ಕಳಿಗೆ ಉಚಿತವಾಗಿ ನೇತ್ರ ತಪಾಸಣಾ ಶಿಬಿರವನ್ನು ರಾಜ್ಯದಾದ್ಯಂತ ನಡೆಸಿದ್ದೇವೆ. ಕಳೆದ 12 ವರ್ಷಗಳಿಂದ ಇದುವರೆಗೆ 10 ಸಾವಿರ ಮಕ್ಕಳಿಗೆ ಉಚಿತ ಕನ್ನಡಕವನ್ನು ಹಾಗೂ ಅವಶ್ಯಕತೆ ಇರುವವರಿಗೆ 300ಕ್ಕೂ ಹೆಚ್ಚು ಉಚಿತ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ದೃಷ್ಟಿಯನ್ನು ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್ ಅನ್ನು ಹೆಚ್ಚು ಹೆಚ್ಚು ಬಳಕೆ ಮಾಡುತ್ತಿರುವುದರಿಂದ ದೃಷ್ಟಿಯಲ್ಲಿ ದೋಷ ಕಂಡುಬರುತ್ತದೆ. ಆದ್ದರಿಂದ ಮಕ್ಕಳು 20 ನಿಮಿಷ ಕಂಪ್ಯೂಟರ್‍ನಲ್ಲಿ ಕೆಲಸ ಮಾಡಿದರೆ, 2 ಸೆಕೆಂಡ್ ಆದರೂ ಹೊರಬಂದು ದೂರದೃಷ್ಟಿಯನ್ನು ನೋಡಬೇಕು. ಇದು ಒಳ್ಳೆಯ ಬೆಳವಣಿಗೆ. ತಾಯಂದಿರು ತಮ್ಮ ಮಕ್ಕಳಿಗೆ ದೃಷ್ಟಿಯ ಬಗ್ಗೆ ಅರಿವು ಹಾಗೂ ತಿಳುವಳಿಕೆಯನ್ನು ಮೂಡಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಐವರಿ ಸಿಟಿಯ ಅಧ್ಯಕ್ಷರಾದ ಎಂ.ಎನ್.ರಮೇಶ್ ಮಾತನಾಡಿ, ಇಂದು ನಾವು ವಿದ್ಯಾರ್ಥಿಗಳಿಗೆ ನೇತ್ರ ದೃಷ್ಟಿದೋಷವನ್ನು ತಪಾಸಣೆ ಮಾಡಿಸುತ್ತಿರುವುದು ಎಲ್ಲರೂ ಕೂಡ ಈ ಉಚಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ, ತಮ್ಮ ಕಣ್ಣುಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕೆಂದು ಮನವಿ ಮಾಡಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಇಫ್ತಿಕಾರ್ ಅಹಮದ್, ಮಾಜಿ ವಲಯ ಸಹಾಯಕ ರಾಜ್ಯಪಾಲ ಸುನಿಲ್ ಬಾಳಿಗಾ, ವಲಯ-7ರ ಜಿಲ್ಲಾ ಸಹಾಯಕ ರಾಜ್ಯಪಾಲ ಬಾಲಚಂದರ್, ಕಾರ್ಯದರ್ಶಿ ಆರ್.ಮುತ್ತುಕುಮಾರನ್, ಖಜಾಂಚಿ ಕೇಶವ್ ಕಾಂಚನ್, ಪೂಜಾ ಬಾಳಿಗಾ, ಪುಷ್ಪಾ ಕಾಂಚನ್, ಶಬನಾ ಇಫ್ತಿಕಾರ್, ಪ್ರಸಾದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. (ಜಿ. ಕೆ, ಎಸ್. ಎಚ್)

Leave a Reply

comments

Related Articles

error: