ಮೈಸೂರು

ಶಾರದಾವಿಲಾಸ ವಿದ್ಯಾಸಂಸ್ಥೆ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ನಮ್ಮ ನಡಿಗೆ ರಾಷ್ಟ್ರೈಕ್ಯತೆದೆಡೆಗೆ’ ಕಾಲ್ನಡಿಗೆ ಜಾಥಾಕ್ಕೆ ಚಾಲನೆ

ಮೈಸೂರು, ಆ.10:- ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ವಿದ್ಯಾಸಂಸ್ಥೆಯ ವತಿಯಿಂದ ಇಂದು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ನಮ್ಮ ನಡಿಗೆ ರಾಷ್ಟ್ರೈಕ್ಯತೆದೆಡೆಗೆ’ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಮೈಸೂರು ಮಹಾನಗರಪಾಲಿಕೆಯ ಮಹಾಪೌರರಾದ ಸುನಂದ ಪಾಲನೇತ್ರ ಅವರು, ದೇಶವನ್ನು ಮುನ್ನಡೆಸುವಲ್ಲಿ ಯುವಕರ ಪಾತ್ರ ಬಹಳ ಮುಖ್ಯ. ನಮ್ಮ ದೇಶ ಭಾರತ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವಸಂತಗಳನ್ನು ಕಳೆದಿದ್ದೇವೆ. ಈ ಸ್ವಾತಂತ್ರ್ಯ ಸಂಭ್ರಮ, ಸಡಗರದ ಸಂದರ್ಭದಲ್ಲಿ ‘ನಮ್ಮ ನಡಿಗೆ ರಾಷ್ಟ್ರೈಕ್ಯತೆದೆಡೆಗೆ’ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿರುವುದು ನಮಗೆಲ್ಲರಿಗೂ ಸ್ಪೂರ್ತಿ ಹಾಗೂ ಹರ್ಷದಾಯಕ ಸಂಗತಿ. ದೇಶದಲ್ಲಿ ಭಾವೈಕ್ಯತೆಯನ್ನು ಮೂಡಿಸುವುದು ನಮ್ಮೆಲ್ಲರ ಗುರಿಯಾಗಬೇಕು. ದೇಶ ಅಭಿವೃದ್ಧಿ ಹೊಂದಿದರೆ ಅಲ್ಲಿನ ಪ್ರಜೆಗಳು ಕ್ಷೇಮದಿಂದ, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ಆಲೋಚಿಸಬೇಕೆಂದು ತಿಳಿಸಿದರು.

ಶಾರದಾವಿಲಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಡಾ.ಬಿ.ಎಂ.ಸುಬ್ರಾಯ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದ ಮಹನೀಯರನ್ನು, ಸೇನಾನಿಗಳನ್ನು ನಾವೆಂದಿಗೂ ಮರೆಯಬಾರದು. ರಾಷ್ಟ್ರಪ್ರೇಮವನ್ನು ಮೆರೆಯಬೇಕು. ದೇಶದ ಅಭಿವೃದ್ಧಿ ನಮ್ಮೆಲ್ಲರ ಶಕ್ತಿಯಾಗಬೇಕು ಎಂದು ತಿಳಿಸಿ, ಯುವಕರು ಇಂದು ಒಗ್ಗಟ್ಟಾಗಿ ದೇಶ ಸೇವೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾರದಾವಿಲಾಸ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಚಂದ್ರಶೇಖರ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲ್ನಡಿಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ‘ವಂದೇ ಮಾತರಂ’, ‘ಬೋಲೋ ಭಾರತ್ ಮಾತಾ ಕೀ ಜೈ’, ‘ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ರ್ ಅವರಿಗೆ ಜೈ’ ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕೀ ಜೈ’, ‘ಮನೆಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ, ದೇಶಪ್ರೇಮವನ್ನು ಮೆರೆಯಿರಿ’ ಮುಂತಾದ ಘೋಷಣೆಗಳನ್ನು ಕೂಗುತ್ತಾ ತ್ರಿವರ್ಣ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು.

ಮೈಸೂರು ಮಹಾನಗರಪಾಲಿಕೆಯ ಸದಸ್ಯರಾದ ಡಾ.ಜಿ.ರೂಪ, ಶಾರದಾವಿಲಾಸ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಿರಿಯ ಸದಸ್ಯರಾದ ಆರ್.ನರಸಿಂಹ, ಎಸ್.ಎಲ್.ರಾಮಚಂದ್ರ, ಶಾರದಾವಿಲಾಸ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ದೇವಿಕಾ, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹನುಮಂತಾಚಾರ್ ಜೋಷಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಕೆ.ಅಶೋಕಕುಮಾರ್, ಸಂಸ್ಥೆಯ ಶಾಲಾ-ಕಾಲೇಜಿನ ಮುಖ್ಯಸ್ಥರು, 1800ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: