ಮೈಸೂರು

ಜಗತ್ತಿನಲ್ಲೇ ಕರ್ನಾಟಕ ಶೋಭಾಯಮಾನವಾಗಿದೆ : ಡಾ. ಬಿ.ವಿ. ವಸಂತಕುಮಾರ್‌

ಮೈಸೂರು,ಆ.13:- ಭೂಮಿಯಲ್ಲಿಯೇ ಕರ್ನಾಟಕ ಅತ್ಯಂತ ಶೋಭಾಯಮಾನವಾಗಿದೆ ಎಂದು ಪ್ರಾಧ್ಯಾಪಕರಾದ ಡಾ. ಬಿ.ವಿ. ವಸಂತಕುಮಾರ್‌ ಅವರು ತಿಳಿಸಿದರು.

ಇತ್ತೀಚೆಗೆ ಮೈಸೂರು ಶ್ರೀ ಸುತ್ತೂರು ಮಠದಲ್ಲಿ ಶ್ರಾವಣಮಾಸದ 13ನೇ ದಿನದ ಪ್ರವಚನದಲ್ಲಿ ಮಾತನಾಡಿ ಕರ್ನಾಟಕವನ್ನು ಬೆಳುವಲದನಾಡು, ಬನವಾಸಿ ಪ್ರಾಂತ್ಯ, ಕುಂತಳ ದೇಶ, ವೈಜಯಂತಿಪುರ, ಮಹಿಷಾಪುರ ಎಂದು ವಿಧ ವಿಧವಾದ ಹೆಸರುಗಳಿಂದ ಕರೆಯಲಾಗುತ್ತಿತ್ತು. ಕದಂಬರಿಂದ ಹಿಡಿದು ಮೈಸೂರು ಒಡೆಯರವರೆಗೂ ಕರ್ನಾಟಕವನ್ನು ಸಮರ್ಥವಾಗಿ ಆಳಿದರು. ಸರ್ವಧರ್ಮದ ಸಮನ್ವಯದ ಭೂಮಿಯಿದು. ಮನುಷ್ಯ ಇನ್ನೊಂದು ಧರ್ಮವನ್ನು ಗೌರವಿಸುವುದನ್ನು ಕಲಿತಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಈ ಭೂಮಿಯಲ್ಲಿ ವಿವಿಧ ಜಾತಿ, ಮತ, ಪಂಥ, ದೇವರುಗಳಿವೆ. ವಿದ್ವಾಂಸರುಗಳಿಗೆ ಈ ನಾಡಿನಲ್ಲಿ ಆಶ್ರಯ ನೀಡಲಾಗಿತ್ತು. ಸಮೃದ್ಧವಾದ ಪ್ರಕೃತಿಯಿಂದ ಕೂಡಿತ್ತು ಎಂದರು.

ಹಿಂದೆ ಇಡೀ ಊರು ನನ್ನದು ಎನ್ನುವ ಭಾವನೆಯಿತ್ತು. ತನ್ನ ಮನೆಯ ಹಸು-ಎತ್ತುಗಳಿಗೆ ಜ್ವರ ಬಂದರೆ ತಿಳಿದುಕೊಳ್ಳುವ ಸಾಮರ್ಥ್ಯ ಮನುಷ್ಯನಿಗಿತ್ತು. ಆದರೆ ಇಂದು ತನ್ನ ಹಾಗೂ ತನ್ನ ಮನೆಯವರ ಆರೋಗ್ಯ ಹದಗೆಟ್ಟರೂ ತಿಳಿಯಲಾರದಷ್ಟು ಸಂವೇದನಾರಹಿತನಾಗಿದ್ದಾನೆ. ಮನುಷ್ಯ ತನ್ನ ಸುತ್ತಲಿನ ಪ್ರಕೃತಿಯ ಮೇಲೆ ವಿಶಿಷ್ಟವಾದ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾನೆ. ಪ್ರಭಾವ ಎನ್ನುವುದು ಮನುಷ್ಯನ ತೇಜಸ್ಸು. ಉದಾಹರಣೆಗೆ ಇಂದು ಸುತ್ತೂರು ಶ್ರೀಕ್ಷೇತ್ರದ ಪ್ರಭಾವ ಸಾಗರಗಳನ್ನೂ ದಾಟಿ ಅಮೆರಿಕದಲ್ಲಿಯೂ ಕರ್ನಾಟಕದ ಸಾಂಸ್ಕೃತಿಕ ಪ್ರಭಾವವನ್ನು ಪಸರಿಸುತ್ತಿದೆ. ಕರ್ನಾಟಕ ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೂ ಅತ್ಯಂತ ವಿವಿಧ ಬಗೆಗಳಿಂದ ಕೂಡಿದ ಸಮೃದ್ಧತೆಯನ್ನು ಹೊಂದಿದೆ. ಕಷ್ಟಪಟ್ಟರೆ ಮಾತ್ರ ಸುಖ ದೊರಕುತ್ತದೆ. ಸುಖದ ಆಗರವನ್ನು ತಿಳಿಯದ ಹೊರತು ಅದು ದೊರೆಯಲು ಸಾಧ್ಯವಿಲ್ಲ. ಈ ನಾಡಿನಲ್ಲಿ ಅನೇಕರು ತಾವು ದೀಪದಂತೆ ಸುಟ್ಟುಕೊಂಡು ಬೇರೆಯವರಿಗೆ ಬೆಳಕು ನೀಡಿದ್ದಾರೆ. ಸತ್ಯವೇ ನಮ್ಮ ಮನೆಯ ದೇವರು ಎಂದು ನಂಬಲಾಗಿದೆ. ನೀತಿ-ಪ್ರೀತಿ, ಶಕ್ತಿ, ವಿವೇಕಗಳ ಆಧಾರದ ಮೇಲೆ ಕರ್ನಾಟಕ ರೂಪಗೊಂಡಿದೆ ಎಂದು ತಿಳಿಸಿದರು.

ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ದೃಷ್ಟಿ ಇನ್‌ಫ್ರಾ ಅಂಡ್‌ ಡೆವಲಪರ್ಸ್‌ ನ ಮಾಲೀಕರಾದ ಕೀಳನಪುರದ ಕೆ.ಎನ್. ರವಿಶಂಕರ್‌ ಅವರು ಸೇವಾರ್ಥ ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಭಕ್ತಾದಿಗಳು ಹಾಗೂ ಆಧ್ಯಾತ್ಮಿಕ ಜಿಜ್ಞಾಸುಗಳು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: