ಕರ್ನಾಟಕಪ್ರಮುಖ ಸುದ್ದಿ

ಕೃಷ್ಣಾ ನದಿಗೆ 2.30 ಲಕ್ಷ ಕ್ಯುಸೆಕ್‌ ಹರಿವು : ಮತ್ತೆ ಪ್ರವಾಹ ಆತಂಕ

ರಾಜ್ಯ(ಬಾಗಲಕೋಟೆ),ಆ.13 : ನಾರಾಯಣಪುರ ಜಲಾಶಯದಿಂದ ಶುಕ್ರವಾರ ಕೃಷ್ಣಾ ನದಿಗೆ 2.30 ಲಕ್ಷ ಕ್ಯುಸೆಕ್‌ ನೀರು ಹರಿಬಿಟ್ಟಿರುವ ಹಿನ್ನೆಲೆ ಮತ್ತೆ ಪ್ರವಾಹ ಆತಂಕ ಆವರಿಸಿದೆ.

ಕೃಷ್ಣ ನದಿ ತೀರದ ಗ್ರಾಮಗಳಲ್ಲಿ ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಲಾಗಿದೆ. ಪದೇ ಪದೆ ಪ್ರವಾಹ ಆತಂಕ ನೆರೆ ಸಂತ್ರಸ್ತರ ಜೀವ ಹಿಂಡುತ್ತಿದೆ. ನದಿ ತೀರಕ್ಕೆ ಜನ ಜಾನುವಾರುಗಳು ಹೋಗದಂತೆ ಗ್ರಾಪಂ ಮೂಲಕ ಡೆಂಗುರ ಸಾರಲಾಗಿದೆ. ಪ್ರವಾಹದಲ್ಲಿ ಕೈಗೊಳ್ಳಬಹುದಾದ ಎಲ್ಲ ಮುನ್ನೆಚ್ಚರಿಕೆಯನ್ನು ತಾಲೂಕು ಆಡಳಿತ ಕೈಗೊಂಡಿದೆ.

ತಿಂಥಿಣಿ ಬ್ರಿಜ್‌ನಿಂದ ಗೂಗಲ್‌ವರೆಗೆ ಸುಮಾರ 56 ಕಿಮೀ ಕೃಷ್ಣಾ ನದಿ ತೀರದಲ್ಲಿರುವ ಸಾವಿರಾರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಬಿತ್ತನೆಗಾಗಿ ಲಕ್ಷಾಂತರ ರು. ವೆಚ್ಚ ಮಾಡಿದ್ದ ರೈತರಿಗೆ ಪ್ರವಾಹ ಆತಂಕ ಕಾಡಲಾರಂಭಿಸಿದೆ. ಹೂವಿನಹೆಡಗಿ, ಜೋಳದಹೆಡಗಿ, ಗಾಗಲ್‌, ಗೂಗಲ್‌ ಸೇರಿದಂತೆ ಇತರೆ ಹಳ್ಳಿಗಳಲ್ಲಿ ಅತಿ ಹೆಚ್ಚು ಗದ್ದೆಯಲ್ಲಿ ಭತ್ತ ನಾಟಿ ಮಾಡಲಾಗಿದೆ. ಮೊದಲೇ ಭತ್ತ ಇಳುವರಿ ಕೊರತೆ ಹಿನ್ನೆಲೆ ಕೈಸೊಟ್ಟಿಕೊಂಡಿದ್ದ ರೈತರಿಗೆ ಇದೀಗ ಪ್ರವಾಹ ಆತಂಕ ಆವರಿಸಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ನದಿ ತೀರದಲ್ಲಿ ಬೀಡುಬಿಟ್ಟಿದ್ದಾರೆ. ನದಿ ಹತ್ತಿರಕ್ಕೆ ಯಾರೂ ಹೋಗದಂತೆ ಎಚ್ಚರಕೆ ವಹಿಸಲಾಗಿದೆ.

ಲಿಂಗಸುಗೂರು,  ಕೃಷ್ಣಾನದಿಗೆ ಬಸವಸಾಗರ ಜಲಾಶಯದಿಂದ 25 ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ನದಿಪಾತ್ರದಲ್ಲಿ ಪ್ರವಾಹದ ಆತಂಕ ಹೆಚ್ಚುತ್ತಿದೆ. ತಾಲೂಕಿನ ಕಡದರಗಡ್ಡಿ, ಯಳಗುಂದಿ, ಹಂಚಿನಾಳ, ಯರಗೋಡಿ ಸೇರಿದಂತೆ ನಡುಗಡ್ಡೆ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಶೀಲಹಳ್ಳಿ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು ಜನ-ಜೀವನದ ಸಂಪರ್ಕಕ್ಕೆ ತೀವ್ರ ಅಡಚಣೆ ಉಂಟಾಗಿದೆ. ನದಿಗೆ 2.20 ಲಕ್ಷ ಕ್ಯುಸೆಕ್‌ ಒಳ ಹರಿವು ಇದೆ. 2.30 ಲಕ್ಷ ಕ್ಯುಸೆಕ್‌ ನೀರು ನದಿಗೆ ಬಿಡಲಾಗುತ್ತಿದೆ. 492.25 ಮೀಟರ್‌ ಎತ್ತರದ ಜಲಾಶಯ 33.31 ಟಿಂಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಸದ್ಯ ಅಣೆಕಟ್ಟೆಯಲ್ಲಿ 491.10 ಮೀಟರ್‌, 28.24 ಟಿಎಂಸಿ ನೀರು ಸಂಗ್ರಹವಿದೆ.

ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಮಳೆ ಪ್ರಭಾವ ಇಳಿಮುಖವಾಗಿದ್ದರೂ ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶದಲ್ಲಿ ಮುಂದುವರಿದಿರುವುದರಿಂದ ಕೃಷ್ಣಾ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು, ತೀರ ಪ್ರದೇಶಗಳಲ್ಲಿ ಪ್ರವಾಹಾತಂಕ ಎದುರಾಗಿದೆ. ಇದರೊಂದಿಗೆ ನಾರಾಯಣಪುರದ ಬಸವರಾಜಸಾಗರ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ನೀರನ್ನು ಹೊರಬಿಟ್ಟಿರುವುದರಿಂದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳು ಮುಳುಗಡೆ ಭೀತಿಯನ್ನು ಎದುರಿಸುತ್ತಿವೆ.(ಎಸ್.ಎಂ)

Leave a Reply

comments

Related Articles

error: