ಮೈಸೂರು

ಸುತ್ತೂರು ಮಠದಲ್ಲಿ ಆ.18ರಂದು ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 107ನೇ ಜಯಂತಿ ಆಚರಣೆ

ಮೈಸೂರು,ಆ.16:- ಸುತ್ತೂರು ಜಗದ್ಗುರು ಶ್ರೀವೀರ ಸಿಂಹಾಸನ ಮಹಾಸಂಸ್ಥಾನ ಮಠದ 23ನೆಯ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 107ನೇ ಜಯಂತಿಯನ್ನು ಸುತ್ತೂರು ಮಠದಲ್ಲಿ ಆ.18ರಂದು ಬೆಳಿಗ್ಗೆ 11ಗಂಟೆಗೆ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಆಚರಿಸಲಾಗುತ್ತದೆ.

ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜೆಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್ ಮಠ ಮಾಹಿತಿ ನೀಡಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಧ್ಯಕ್ಷತೆವಹಿಸಲಿದ್ದಾರೆ. ಸಹಕಾರ ಹಾಗೂ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಶ್ರೀಗಳ ಜಯಂತಿ ಆಚರಣೆಯ ದಿನದಂದು ಮಧ್ಯಾಹ್ನ 2ಗಂಟೆಗೆ ಜೆಎಸ್ ಎಸ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಪ್ರತಿವರ್ಷದಂತೆ ಈ ವರ್ಷವೂ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ವರ್ಷ 131ಮಂದಿ ನಿವೃತ್ತರಾಗಿದ್ದು 42ಮಂದಿ ಕೆಲಸದಿಂದ ಬಿಡುಗಡೆ ಪಡೆದಿದ್ದಾರೆ. 16ಮಂದಿ ಸೇವೆಯಲ್ಲಿರುವಾಗಲೇ ದೈವಾಧೀನರಾಗಿದ್ದಾರೆ. ಒಟ್ಟು 189ಮಂದಿ ಹಾಗೂ ಅವರ ಕುಟುಂಬದವರನ್ನು ಅಭಿನಂದಿಸಲಾಗುತ್ತದೆ ಎಂದು ತಿಳಿಸಿದರು.

ಜೆಎಸ್ ಎಸ್ ವಿದ್ಆಸಂಸ್ಥೆಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಜೆಎಸ್ ಎಸ್ ಶಾಲಾ ಕಾಲೇಜುಗಳ ಉತ್ತಮ ವಾರ್ಷಿಕ ಸಂಚಿಕೆಗಳಿಗೆ ಹಾಗೂ ಪ್ರಸಾದ ದ್ವೈ ಮಾಸಿಕ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಜೆಎಸ್ ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಶ್ರೀಗಳ ಜಯಂತಿಯ ದಿನ ಆಗಸ್ಟ್ 29ರಂದು ಮೈಸೂರಿನ ಮೃಗಾಲಯದ ಪ್ರಾಣಿ ಪಕ್ಷಿ ಸಂಕುಲಕ್ಕೆ ಆಹಾರ ವಿತರಣೆ ಮಾಡಲು ಪ್ರತಿವರ್ಷದಂತೆ ಈ ವರ್ಷವೂ ಒಂದು ಲಕ್ಷ ರೂ.ಗಳ ಚೆಕ್ ನ್ನು ನೀಡಲಾಗುತ್ತದೆ ಎಂದರು.

ಜಯಂತಿಮಹೋತ್ಸವದ ಅಂಗವಾಗಿ ರಕ್ತದಾನ, ನೇತ್ರದಾನ ಹಾಗೂ ದೇಹದಾನಗಳ ಕುರಿತು ಅರಿವು ಮೂಡಿಸಲಾಗುತ್ತದೆ. ಸಮಾರಂಭದಂದು ಸಾಂಕೇತಿಕವಾಗಿ ರಕ್ತದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಜಯಂತಿ ಮಹೋತ್ಸವದ ಅಂಗವಾಗಿ ಜೆಎಸ್ ಎಸ್ ಗ್ರಂಥಮಾಲೆಯ ಪ್ರಕಟಣೆಗಳಿಗೆ ಆಗಸ್ಟ್ 18ರಿಂದ ಸೆಪ್ಟೆಂಬರ್ 30ರವರೆಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತದೆ. ಜೆಎಸ್ ಎಸ್ ಅಂಗಸಂಸ್ಥೆಗಳಲ್ಲಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಹಾಗೂ ಸಾರ್ವಜನಿಕರಿಂದ ಸೆಪ್ಟೆಂಬರ್ ಅಂತ್ಯದವರೆಗೆ ವಿವಿಧೆಡೆಗಳಲ್ಲಿ ಜಯಂತಿ ಮಹೋತ್ಸವ ಆಚರಿಸಲಾಗುತ್ತದೆ. ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತದೆ. ಗಾಲು ಕುರ್ಚಿ, ಪುಸ್ತಕಗಳು, ನೋಟ್ ಪುಸ್ತಕಗಳ ವಿತರಣೆ, ಶಾಲಾ ಬ್ಯಾಗ್ ಗಳು, ವಸ್ತ್ರಗಳು ಇತ್ಯಾದಿಗಳು ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದವರು ಆನ್ ಲೈನ್ ನಲ್ಲಿ ಯೂಟ್ಯೂಬ್ ಹಾಗೂ ಫೇಸ್ ಬುಕ್ ಲಿಂಕ್ ಗಳಲ್ಲಿ ವೀಕ್ಷಿಸಬಹುದಾಗಿದೆ. ಲಿಂಕ್ http://Youtube.com/c/JSSMahavidyapeethaonline-https://www.facebook.com/JSSMVP ಮೂಲಕ ವೀಕ್ಷಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್, ನಿರಂಜನಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: