ಕರ್ನಾಟಕಪ್ರಮುಖ ಸುದ್ದಿ

ಕಾಫಿ ತೋಟದಲ್ಲಿ ಬೀಡುಬಿಟ್ಟ 50ಕ್ಕೂ ಹೆಚ್ಚು ಕಾಡಾನೆಗಳು : ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ರಾಜ್ಯ(ಹಾಸನ),ಆ.16 : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಕಾಡಾನೆಗಳ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಸಕಲೇಶಪುರ ತಾಲೂಕಿನ ಬೈಕೆರೆ, ನಾರ್ವೆಪೇಟೆ ಗ್ರಾಮಗಳಲ್ಲಿ ನಡೆದಿದೆ.

ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ನಾಟಿ ಮಾಡಿದ್ದ ಭತ್ತದ ಗದ್ದೆಯಲ್ಲೆಲ್ಲಾ ಓಡಾಡಿ, ತುಳಿದು ನಾಶ ಮಾಡಿವೆ. ಕಾಡಾನೆಗಳು ಕಾಫಿ ತೋಟದಲ್ಲಿ ಮನಬಂದಂತೆ ಓಡಾಡುತ್ತಿರುವುದರಿಂದ ಕಾಫಿ, ಗಿಡಗಳನ್ನು ಮುರಿದಿವೆ. ರೈತರು ಬೆಳೆದಿದ್ದ ಬಾಳೆ, ಅಡಿಕೆ ಗಿಡಗಳನ್ನು ನಾಶ ಮಾಡಿವೆ. 20 ವರ್ಷಗಳಿಂದ ಬೆಳೆದಿದ್ದ ಕಾಫಿ ಗಿಡಗಳನ್ನು ಕಳೆದುಕೊಂಡು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗ್ರಾಮದ ಗಿಡ್ಡಪ್ಪ, ಚಂದ್ರೇಗೌಡ, ಮಲ್ಲೇಶ್ ಹಾಗೂ ಇತರ ರೈತರ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿ ಹೋಗಿದ್ದಾರೆ. ಪ್ರತಿನಿತ್ಯ ಕಾಡಾನೆಗಳಿವೆ ಎಚ್ಚರಿಕೆಯಿಂದ ಓಡಾಡುವಂತೆ ಮಾಹಿತಿ ನೀಡುವ ಅರಣ್ಯ ಇಲಾಖೆ ಸಿಬ್ಬಂದಿ ಇಷ್ಟೊಂದು ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದರೂ ಇತ್ತ ತಿರುಗಿ ನೋಡಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಲೂರು ತಾಲೂಕಿನ ಸುಲಗಳಲೆ ಗ್ರಾಮದಲ್ಲೂ ಕಾಡಾನೆಗಳ ಹಿಂಡು ದಾಳಿ ಮಾಡಿ ಕಾಫಿ, ಮೆಣಸು, ತೆಂಗು, ಕಿತ್ತಳೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ. 50ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಂಧಲೆ ನಡೆಸಿದ್ದು, ಕಾಫಿ ತೋಟದಲ್ಲಿದ್ದ ನೀರಾವರಿ ಪೈಪ್ಗಳನ್ನು ತುಳಿದು ಹಾಕಿವೆ. ಗ್ರಾಮದ ದೇವರಾಜ್, ಜಗದೀಶ್, ಕೆಂಚೇಗೌಡ, ರಾಮಚಂದ್ರ ಎಂಬುವವರ ಕಾಫಿ ತೋಟದಲ್ಲಿ ಬೆಳೆ ನಾಶವಾಗಿದ್ದು, ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಹೆಚ್ಚು ಮರಿಗಳಿರುವ ಕಾಡಾನೆಗಳ ಹಿಂಡು ಗ್ರಾಮದ ಬಳಿಯೇ ಬೀಡುಬಿಟ್ಟಿದ್ದು, ಜೀವಭಯದಿಂದ ಕಾಫಿ ತೋಟಕ್ಕೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.(ಎಸ್.ಎಂ)

Leave a Reply

comments

Related Articles

error: