ಕರ್ನಾಟಕಪ್ರಮುಖ ಸುದ್ದಿ

ಫಿಲ್ಮಿ ಸ್ಟೈಲ್ ನಲ್ಲಿ ಪತ್ನಿಯ ಕೊಲೆ : ಕೊನೆಗೆ ಪೊಲೀಸರ ಅತಿಥಿಯಾದ ಪತಿ

ರಾಜ್ಯ(ಬೆಂಗಳೂರು),ಆ.17 : ಪ್ರೀತಿಸಿ ಮದುವೆಯಾದವಳ ಟಾರ್ಚರ್ ತಡೆಯೋಕಾಗದೇ ಫಿಲ್ಮಿ ಸ್ಟೈಲ್ ಪ್ಲ್ಯಾನ್ ಮಾಡಿ ಯಾರಿಗೂ ಗೊತ್ತಾಗದಂತೆ ಆಕೆಯ ಕೊಲೆ ಮಾಡಿ ಬಳಿಕ ತಾನೇ ಪೊಲೀಸ್ ಠಾಣೆಗೆ ದೂರು ನೀಡಿದ ಪತಿಯ ಕೃತ್ಯ ಪೊಲೀಸರ ತನಿಖೆಯಿಂದ ಬಯಲಾಗಿದೆ.

ಹೌದು, ಮೊದಲೇ ಪ್ಲ್ಯಾನ್ ಹಾಕಿ, ಪತ್ನಿಯ ಕೊಲೆ ಮಾಡಿ ಬಳಿಕ ಮಡಿವಾಳ ಪೊಲೀಸರಿಗೆ ದೂರನ್ನೂ ಕೊಟ್ಟಿದ್ದಾನೆ. ಆದರೆ ಅನುಮಾನಗೊಂಡ ಪೊಲೀಸರು ಆತನನ್ನೇ ವಿಚಾರಣೆ ನಡೆಸಿದಾಗ ಖತರ್ನಾಕ್ ಪ್ಲ್ಯಾನ್ ಬಗ್ಗೆ ಬಾಯಿ ಬಿಟ್ಟಿದ್ದಾನೆ.

ಬೆಂಗಳೂರಿನ ಮಡಿವಾಳದ ಪೃಥ್ವಿರಾಜ್, ಜ್ಯೋತಿಯನ್ನು 8 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಮದುವೆಯ ಬಳಿಕ ನಿರಂತರವಾಗಿ ಜಗಳವಾಡುತ್ತಿದ್ದರಿಂದ ಪೃಥ್ವಿರಾಜ್ ಟಾರ್ಚರ್ ತಡೆಯಲಾಗದೇ ಪತ್ನಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ.

ಮೊದಲೇ ಯೋಜಿಸಿದ ಪ್ಲ್ಯಾನ್ನಂತೆ ಪೃಥ್ವಿರಾಜ್ ತನ್ನ ಹಾಗೂ ಪತ್ನಿಯ ಮೊಬೈಲ್ ಫೋನ್ಗಳನ್ನು ಮನೆಯಲ್ಲಿಯೇ ಇರಿಸಿ ಟ್ರಿಪ್ಗೆ ಕರೆದುಕೊಂಡು ಹೋಗಿದ್ದ. ಆಗಸ್ಟ್ 2 ರಂದು ಹೆಂಡತಿಯನ್ನು ಉಡುಪಿಯ ಮಲ್ಪೆ ಬೀಚ್ಗೆ ಕರೆದುಕೊಂಡು ಹೋಗಿ, ಅಲ್ಲಿ ಸಮುದ್ರದಲ್ಲಿ ಮುಳುಗಿಸಿ ಆಕೆಯ ಕೊಲೆ ಮಾಡುವುದು ಪೃಥ್ವಿರಾಜ್ ಪ್ಲ್ಯಾನ್ ಆಗಿತ್ತು. ಬಳಿಕ ಅದನ್ನು ನ್ಯಾಚುರಲ್ ಡೆತ್ ಎಂದು ಬಣ್ಣಿಸುವ ಯೋಜನೆ ಮಾಡಿದ್ದ. ಆದರೆ ಸಮುದ್ರದ ಆಳಕ್ಕೆ ಇಳಿಯದಂತೆ ಬೋರ್ಡ್ ಹಾಕಿದ್ದರಿಂದ ಆತನ ಪ್ಲ್ಯಾನ್ ಫ್ಲಾಪ್ ಆಗಿತ್ತು.

ಆದರೂ ಪಟ್ಟು ಬಿಡದ ಪೃಥ್ವಿರಾಜ್, ಇನ್ನೊಂದು ಪ್ಲ್ಯಾನ್ ಮಾಡಿ, ಜ್ಯೋತಿಯನ್ನು ಸಕಲೇಶಪುರದ ಗುಂಡ್ಯ ಬಳಿ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಯ ವೇಲ್ನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದ. ಬಳಿಕ ಆಕೆಯ ಶವವನ್ನು ಅಲ್ಲಿಯೇ ಪೊದೆಯೊಂದರಲ್ಲಿ ಎಸೆದಿದ್ದ.

ಪ್ಲ್ಯಾನ್ನಂತೆ ಎಲ್ಲಾ ಮುಗಿಸಿಕೊಂಡು ಬೆಂಗಳೂರಿಗೆ ಬಂದ ಪೃಥ್ವಿರಾಜ್, ಮಡಿವಾಳ ಪೊಲೀಸ್ ಠಾಣೆಯಲ್ಲಿ ಪತ್ನಿ ಮಿಸ್ಸಿಂಗ್ ಎಂದು ದೂರು ನೀಡಿದ್ದಾನೆ. ಕಂಪ್ಲೆಂಟ್ ಪಡೆದ ಪೊಲೀಸರು ತನಿಖೆಗೆ ಇಳಿದಿದ್ದರು. ವೇಳೆ ಅವರಿಬ್ಬರ ಫೋನ್ಗಳು ಮನೆಯಲ್ಲಿಯೇ ಇದ್ದ ಬಗ್ಗೆ ತಿಳಿದು ಅನುಮಾನಗೊಂಡ ಪೊಲೀಸರು ಸಿಸಿಟಿವಿ ಹಾಗೂ ಸಿಡಿಆರ್ ಆಧರಿಸಿ ಪೃಥ್ವಿರಾಜ್ನನ್ನು ಬಂಧಿಸುತ್ತಾರೆ. ವೇಳೆ ಪೃಥ್ವಿರಾಜ್ ಬಾಯಿ ಬಿಡಿಸಿದ ಪೊಲೀಸರು ಕೊಲೆ ಹಿಂದಿನ ರಹಸ್ಯವನ್ನೆಲ್ಲಾ ರಿವೀಲ್ ಮಾಡಿದ್ದಾನೆ.

ನಾನು ಹೆಂಡತಿಯಿಂದ ಬಹಳ ಕಿರಿಕಿರಿ ಅನುಭವಿಸಿದ್ದೇನೆ. ಆಕೆ ಇನ್ನೊಬ್ಬ ಗೆಳೆಯನನ್ನು ಹೊಂದಿದ್ದಳು. 2 ಬಾರಿ ಯುಪಿಎಸ್ಸಿ ಎಕ್ಸಾಂ ಬರೆದಿದ್ದ ಆಕೆ ಟ್ರೈನಿಂಗ್ಗಾಗಿ ದೆಹಲಿಗೆ ಹೋಗಿದ್ದಳು. ಅಲ್ಲಿ ಅವಳು ಒಬ್ಬ ಯುವಕನೊಂದಿಗೆ ಸಖ್ಯ ಬೆಳೆಸಿದ್ದಳು. ಹೀಗಾಗಿ ನಾನು ಆಕೆಯ ಕೊಲೆಗೆ ಪ್ಲ್ಯಾನ್ ಮಾಡಿದ್ದೆ ಎಂದು ಬಾಯ್ಬಿಟ್ಟಿದ್ದಾನೆ.(ಎಸ್.ಎಂ)

Leave a Reply

comments

Related Articles

error: