ಮೈಸೂರು

ಮಕ್ಕಳ ಬಗ್ಗೆ ಕಾಳಜಿ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಸಮಾಜದಲ್ಲಿ ಆಗಬೇಕು : ಪ್ರೊ. ಆರ್. ಶಿವಪ್ಪ

ಮೈಸೂರು, ಆ. 17:- ಭವ್ಯ ಭಾರತದ ಪ್ರಜೆಗಳು ಮಕ್ಕಳು. ಹೀಗಾಗಿ ಮಕ್ಕಳ ಬಗ್ಗೆ ಕಾಳಜಿ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಸಮಾಜದಲ್ಲಿ ಆಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್. ಶಿವಪ್ಪ ತಿಳಿಸಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ ಹಾಗೂ ಹೈದರಾಬಾದ್‌ ನ ಯುನಿಸ್‌ ಸಹಯೋಗದೊಂದಿಗೆ ‘ಕೋವಿಡ್ ಅವಧಿಯ ನಂತರ ಮಕ್ಕಳ ಸಮಸ್ಯೆ ಕುರಿತು ಪತ್ರಕರ್ತರ ಸಂವೇದನೆ’ ಎಂಬ ವಿಷಯದ ಕುರಿತು ನಡೆದ ಎರಡು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
l
ಸಮಾಜ ಉನ್ನತಿಗೆ ಹೋಗಬೇಕಾದರೆ ಮೌಲ್ಯಗಳು ತುಂಬಾ ಅವಶ್ಯಕ. ಆದರೆ, ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸ್ಥಿತ್ಯಂತರದಲ್ಲಿ ನಾವಿದ್ದೇವೆ. ಪತ್ರಿಕೋದ್ಯಮ ಸಮಾಜದ ಕಣ್ಣು. ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಪತ್ರಿಕಾ ಮಾಧ್ಯಮವೂ ಮಕ್ಕಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಇಂದಿಗೂ ಮಕ್ಕಳಿಗೆ ಯಾವ ಶಿಕ್ಷಣ ಕೊಡಿಸಬೇಕು ಎಂಬ ಪ್ರಶ್ನೆ ನಮ್ಮ ಮುಂದಿದೆ. ಈ ಬಗ್ಗೆ ಒಂದಷ್ಟು ಚರ್ಚೆಗಳಾಗಬೇಕು. ಬಹಳಷ್ಟು ಜನರು ಪುಸ್ತಕಗಳಿಗಿಂತ ಪೇಪರ್ ಓದಿ ಹೆಚ್ಚು ಜ್ಞಾನ ಸಂಪಾದಿಸಿದ್ದಾರೆ. ಈ ಸಮಾಜವನ್ನು ಕಟ್ಟುತ್ತಿರುವ ಕಾಯಕವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಅಮೂಲಾಗ್ರ ಬದಲಾವಣೆಗೆ ಶ್ರಮಿಸುತ್ತಿದ್ದಾರೆ, ಸ್ವಸ್ಥ ಸಮಾಜ ಕಟ್ಟುವಲ್ಲಿ ಪತ್ರಿಕೆಯ ಪಾತ್ರ ದೊಡ್ಡದು, ಎಂದು ಬಣ್ಣಿಸಿದರು.

ಕೋವಿಡ್ ಸಂಕಟದ ಕಾಲ ನಿಧಾನವಾಗಿ ಮಸುಕುತ್ತಿದೆ. ಕೊರೊನಾ ಸಮಯದಲ್ಲಿ ಪತ್ರಕರ್ತರು ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡಿದರು. ಮಕ್ಕಳು ಈ ದೇಶದ ಭವ್ಯ ಪ್ರಜೆಗಳು. ಅವರನ್ನು ನಿರ್ಲಕ್ಷ್ಯ ಮಾಡಿದರೆ ಇಡೀ ಒಂದು ತಲೆಮಾರು ಪೆಟ್ಟು ತಿನ್ನಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜಕ್ಕೆ ದಾರಿದೀಪ ಹಾಗೂ ಶಿಕ್ಷಣ ನೀಡಬೇಕಾದ ದೊಡ್ಡ ಜವಾಬ್ದಾರಿ ಪತ್ರಿಕೆ ಮೇಲೆ ಇರುತ್ತದೆ. ಪೋಷಕರು ಕೂಡ ಮಕ್ಕಳ ಕಲಿಕೆಗೆ ಪೂರಕವಾಗುವ ವಾತಾವರಣ ನಿರ್ಮಾಣ ಮಾಡಬೇಕು. ಯುನಿಸ್‌ ಮಕ್ಕಳಿಗೆ ಉಪಯೋಗವಾಗುವ ಒಳ್ಳೆಯ ಕೆಲಸ ಮಾಡುತ್ತಿದೆ. ಅದು ಹೀಗೆ ಮುಂದುವರಿಯಲಿ ಎಂದು ಆಶಿಸಿದರು.

ತೆಲಂಗಾಣದ ಯುನಿಸ್‌ ಅಧಿಕಾರಿ ಪ್ರೊ. ಪ್ರೊಸನ್ ಸೆನ್ ಮಾತನಾಡಿ, ಇದೊಂದು ವಿನೂತನ ಪ್ರಾಜೆಕ್ಟ್‌. ಕೋವಿಡ್ ಸಮಯದಲ್ಲಿ ಸಾಕಷ್ಟು ಮಕ್ಕಳು ಕೂಡ ಸಾವಿಗೀಡಾದವು. ಅಲ್ಲದೆ, ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿತು. ಶಾಲೆಗಳು ಮುಚ್ಚಿದ ಪರಿಣಾಮ ಮಕ್ಕಳಿಗೆ ಪೌಷ್ಟಿಕಾಹಾರ ಸಿಗಲಿಲ್ಲ. ಸರಕಾರಿ ಶಾಲೆಗಳಲ್ಲಿ ಊಟ, ಮೊಟ್ಟೆ ಕೊಡುತ್ತಿದ್ದವು. ಕೆಲವು ಮಕ್ಕಳು ಮೊಬೈಲ್ ಗೀಳಿಗೆ ಬಿದ್ದವು. ಮಕ್ಕಳ ಮೇಲೆ ದೌರ್ಜನ್ಯ ನಡೆಯಿತು. ಗ್ರಾಮೀಣ ಭಾಗದಲ್ಲಿ ಬಾಲ್ಯವಿವಾಹ ಹೆಚ್ಚಾಯಿತು. ಜೊತೆಗೆ ಬಾಲ ಕಾರ್ಮಿಕರ ಸಂಖ್ಯೆಯೂ ದ್ವಿಗುಣಗೊಂಡಿತು. ಮಕ್ಕಳ ಆರೋಗ್ಯ, ರಕ್ಷಣೆ, ಅವರಿಗಿರುವ ಸೌಲಭಗಳ ಬಗ್ಗೆ ಹೆಚ್ಚು ಚರ್ಚೆ ಆಗಬೇಕು ಎಂದರು.

ಹಿರಿಯ ಪತ್ರಕರ್ತ ಈಶ್ವರ ದೈತೋಟ ಮಾತನಾಡಿ, ಪತ್ರಿಕೋದ್ಯಮಕ್ಕೆ ದೊಡ್ಡ ಹೊಣೆಗಾರಿಕೆ ಇದೆ. ಇಂದು ಶೇ.49ರಷ್ಟು ಪತ್ರಿಕೆಯ ಮಾಲೀಕತ್ವದ ಬಗ್ಗೆ ಇಂದು ಜನರಿಗೆ ಮಾಹಿತಿಯೇ ಇಲ್ಲ. 10 ವರ್ಷದ ಹಿಂದೆ ಶೇ.5ರಷ್ಟು ಸುಳ್ಳು ಸುದ್ದಿ ಬರುತ್ತಿದ್ದವು. ಆದರೀಗ ಶೇ.40ರಷ್ಟು ಸುಳ್ಳು ಸುದ್ದಿ ಬರುತ್ತಿದೆ. ಪ್ರಾದೇಶಿಕ ಭಾಷೆಗಳನ್ನು ನಿರ್ಲಕ್ಷ್ಯ ಮಾಡಬಾರದು. ಮಾಧ್ಯಮಕ್ಕೊಂದು ಜವಾಬ್ದಾರಿ ಇದೆ. ಮಕ್ಕಳ ಭವಿಷ್ಯದ ಬಗ್ಗೆಯೂ ಕಾಳಜಿ ತೋರಿಸಬೇಕು. ಮಕ್ಕಳ ವಿಷಯಕ್ಕೆ ಕಳಕಳಿ ತೋರಿಸುವ ಅಂಶ ಬರಬೇಕು ಎಂದರು.

ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಪ್ರಾಧ್ಯಾಪಕಿ ಪ್ರೊ.ಎಂ.ಎಸ್. ಸಪ್ನ, ಸಹ ಪ್ರಾಧ್ಯಾಪಕಿ ಡಾ. ಮಮತಾ ಎನ್. ಡಾ. ರಾಕೇಶ್ ಸಿ. ಸೇರಿದಂತೆ ಇತರರು ಭಾಗವಹಿಸಿದ್ದರು.(ಕೆ ಎಸ್, ಎಸ್. ಎಚ್)

Leave a Reply

comments

Related Articles

error: