
ಮೈಸೂರು
ವಾಲಿದ ವಿದ್ಯುತ್ ಕಂಬ : ಅನಾಹುತಕ್ಕೂ ಮುನ್ನ ಎಚ್ಚೆತ್ತರೆ ಒಳ್ಳೆಯದು
ಮೈಸೂರು, ಮೇ.18:- ಹಲವು ವಿದ್ಯುತ್ ಕಂಬಗಳು ಮುಂಗಾರಿನ ಆರ್ಭಟಕ್ಕೆ ಧರಾಶಾಹಿಯಾಗಿವೆ. ಇತ್ತೀಚೆಗಷ್ಟೇ ಮರವೊಂದು ಬುಡ ಸಮೇತವಾಗಿ ಬಿದ್ದು, ಎರಡು ಕಾರು, 10 ಬೈಕ್ ಸೇರಿದಂತೆ, ಮೂರು ಲೈಟ್ ಕಂಬಗಳು ನೆಲಕುರುಳಿದ್ದ ಘಟನೆ ಕಣ್ಣ ಮುಂದಿದೆ. ಆದರೆ, ಇದೀಗ ವಿದ್ಯುತ್ ಕಂಬವೊಂದು ಬೀಳುವ ಲಕ್ಷಣಗಳಿದ್ದು, ಹೆಚ್ಚಿನ ಅನಾಹುತವಾಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ. ಮೈಸೂರಿನ ನಜರ್ ಬಾದ್ ನ ತಾಲೂಕು ಕಚೇರಿ ಸಮೀಪ ಯಮ ಸ್ವರೂಪಿಯಂತೆ ಈ ವಿದ್ಯುತ್ ಕಂಬ ಕಾಣುತ್ತಿದೆ. ಈಗಾಗಲೇ ಶೇ.50 ರಷ್ಟು ವಿದ್ಯುತ್ ಕಂಬ ವಾಲಿಕೊಂಡಿದ್ದು, ಯಾವ ಸಮಯದಲ್ಲಿ ಏನಾಗಲಿದೆ ಎಂಬ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಸಿಟಿಟುಡೆಗೆ ಮಾಹಿತಿ ನೀಡಿದ ಸ್ಥಳೀಯ ನಿವಾಸಿ ನಂದೀಶ್, ಸರ್ ಎಲ್ಲ ಕಡೆ ಘಟನೆ ಆದ ಬಳಿಕ ಎಚ್ಚೆತ್ತುಕೊಳ್ಳುತ್ತಾರೆ. ಆದರೆ, ನಾವು ಘಟನೆ ಆಗುವ ಮುನ್ನ ಮಾಹಿತಿ ನೀಡುತ್ತಿದ್ದೇವೆ. ಇನ್ನೆರಡು ಮೂರು ದಿನದಲ್ಲಿ ಮಳೆ ಇರುವ ಕಾರಣ, ಜೋರಾದ ಮಳೆಗೆ ವಿದ್ಯುತ್ ಕಂಬ ಬೀಳುವ ಸಾಧ್ಯತೆಗಳಿವೆ. ಅಧಿಕಾರಿಗಳು ಈ ಕುರಿತು ಗಮನಹರಿಸಲಿ. ಸದ್ಯ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಇದರ ಸಮೀಪ ಹೆಚ್ಚಾಗಿ ಓಡಾಡುತ್ತಾರೆ. ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಅನಾಹುತ ಸಂಭವಿಸಲಿದೆ ಎಂದು ತಿಳಿಸಿದರು.
ಒಟ್ಟಾರೆ, ಸಾವು-ನೋವು ಸಂಭವಿಸದೆ, ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಿ, ನಮ್ಮ ಕಷ್ಟಕ್ಕೆ ಸ್ಪಂದನೆ ನೀಡಲಿ ಎಂಬ ಸ್ಥಳಿಯ ನಿವಾಸಿಗಳ ಕೂಗು ಈಗಲಾದರು ಅಧಿಕಾರಿಗಳಿಗೆ ಕೇಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. – (ವರದಿ: ಎಸ್.ಎನ್)