ಪ್ರಮುಖ ಸುದ್ದಿಮೈಸೂರು

ಕೇಂದ್ರ ಸರ್ಕಾರಕ್ಕೆ ರೈತರ ಕುರಿತು ಕಾಳಜಿಯಿಲ್ಲ: ಪ್ರೊ.ಬಿ.ಕೆ.ಚಂದ್ರಶೇಖರ್ ಆರೋಪ

ಪ್ರಮುಖಸುದ್ದಿ, ಮೈಸೂರು, ಮೇ.18:– ಪಕ್ಷಗಳು ರಾಜಕೀಯ ಮಾಡುವುದನ್ನು ನಿಲ್ಲಿಸಿ ಒಂದೆಡೆ ಕುಳಿತು ರೈತರ ಸಾಲಮನ್ನಾಕುರಿತು ಚರ್ಚೆ ನಡೆಸಿ ಕೇಂದ್ರಕ್ಕೆ ವರದಿ ಕಳುಹಿಸಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್ ತಿಳಿಸಿದರು.

ಮೈಸೂರಿನ ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಲಿದೆ. ಆದರೆ ಸಾಲಮನ್ನಾ ಮಾಡಲಿಕ್ಕೆ ಸಾಧ್ಯವಿಲ್ಲ. ಎನ್ ಎಸ್ ಎಸ್ ವರದಿಯ ಪ್ರಕಾರ ಶೇ.52ರಷ್ಟು ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಆಂಧ್ರದಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ವಿಷಾದಿಸಿದರು. ಕೇಂದ್ರ ಮುಖ್ಯಮಂತ್ರಿಗಳನ್ನು ಟಾರ್ಗೆಟ್ ಮಾಡುವುದನ್ನು ನಿಲ್ಲಿಸಿ ಕೃಷಿ ಮತ್ತು ನೀರಾವರಿ ಅಭಿವೃದ್ಧಿಯತ್ತ ಗಮನಹರಿಸಬೇಕಿದೆ. ರಾಜ್ಯದತ್ತ ಬೆರಳು ಮಾಡಿ ತೋರಿಸುವ ಪ್ರಧಾನಿ ಬರಗಾಲವಿದ್ದರೂ ಅಮೇರಿಕಾಕ್ಕೆ ಹೋಗಿ ಭಾಷಣ ಮಾಡುತ್ತಾರೆ. ಅವರಿಗೆ ರೈತರ ಕುರಿತು ಕಾಳಜಿ ಇಲ್ಲ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು . ರಾಜ್ಯದಲ್ಲಿ 52ಸಾವಿರ ಕೋಟಿ ರೈತರ ಸಾಲವಿದೆ. ಬಜೆಟ್ ನ ಮೂರನೇ ಒಂದು ಭಾಗ ಸಾಲವೇ ಇದೆ. ಅದನ್ನು ಮನ್ನಾ ಮಾಡಲು ಸಾದ್ಯವಿಲ್ಲ ಎಂದರು.

ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್ ಗಡ, ಹರಿಯಾಣದಲ್ಲಿ ಸಾಲಮನ್ನಾ ಮಾಡಿಲ್ಲ. ಉತ್ತರಪ್ರದೇಶದಲ್ಲಿ ಸಾಲಮನ್ನಾ ಮಾಡಲಾಗಿದೆ. ಕೇಂದ್ರ ಬೇರೆ ಮೂಲಗಳಿಂದ ಸಹಾಯ ಮಾಡುತ್ತಿದೆ. ಕೇಂದ್ರ ವಿಶೇಷ ಅಧಿವೇಶನ ಕರೆದು ನೀತಿ ಆಯೋಗದ ವರದಿ ಪಡೆದು ಕೃಷಿ ಕ್ಷೇತ್ರಕ್ಕೆ ಮೂಲ ಸೌಕರ್ಯಗಳನ್ನು ಒಗದಿಸಲು ಪ್ರಯತ್ನಿಸಬೇಕು ಎಂದರು.

ಅಡಗೂರು  ಹೆಚ್.ವಿಶ್ವನಾಥ್ ಪಕ್ಷ ಬಿಡುವ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ವಿಶ್ವನಾಥ್ ಅವರು ಗೌರವಾನ್ವಿತ ರಾಜಕಾರಣಿಗಳು. ಅವರಿನ್ನೂ ಪಕ್ಷ ಬಿಟ್ಟಿಲ್ಲ. ಸಮಸ್ಯೆಯಿದ್ದಲ್ಲಿ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿಕೊಳ್ಳಬಹುದಿತ್ತು. ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೆ ಅವಮಾನ ಮಾಡಿದ್ದಾರೆ. ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮೈಲ್ಯಾಕ್ ಅಧ್ಯಕ್ಷ ಎ.ವೆಂಕಟೇಶ್, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.- (ವರದಿ:ಬಿ.ಎಂ,ಎಸ್.ಎಚ್)

Leave a Reply

comments

Related Articles

error: