ಮೈಸೂರು

ಜ್ಞಾನ ಬಲ ಹೆಚ್ಚಾದರೆ ಅವಕಾಶಗಳೇ ಹುಡುಕಿಕೊಂಡು ಬರುತ್ತವೆ: ಬೋರಯ್ಯ

ಮೈಸೂರು, ಮೇ ೧೯: ಇಂದಿನ ವೇಗದ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನ ಬಲವನ್ನು ಹೆಚ್ಚಿಸಿಕೊಂಡಾಗ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎಂದು ಮೈಸೂರು ರಾಯಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾರ್ಯದರ್ಶಿ ಡಾ.ಕೆ.ಬಿ.ಬೋರಯ್ಯ ಅಭಿಪ್ರಾಯಪಟ್ಟರು.

ಶುಕ್ರವಾರ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ ವತಿಯಿಂದ ನೇಗಿಲಯೋಗಿ ವಿದ್ಯಾವರ್ಧಕ ಸ್ಪರ್ಧಾ ಕೇಂದ್ರದಲ್ಲಿ  ಆಯೋಜಿಸಿದ್ದ ೬ನೇ ವರ್ಷದ ಡಿಪ್ಲೋಮಾ ಸಿಇಟಿ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಬಳಿಕ ಮಾತನಾಡಿದ  ಅವರು, ವಿದ್ಯಾರ್ಥಿಗಳು ಮೊದಲು ಧೈರ್ಯವಂತರಾಗಬೇಕು. ಯಾವುದೇ ವಿಷಯವನ್ನಾದರು ಎದುರಿಸುತ್ತೇನೆ ಎಂಬ ಅಛಲ ವಿಶ್ವಾಸ ಮೂಡಿದಾಗ ಮಾತ್ರ ಯಶಸ್ಸು ಸಾಧ್ಯ. ಯಾವುದೇ ವಿಷಯವಾದರು ಮೇಲು ಕೀಳು ಎಂದು ತಾರತಮ್ಯ ಮಾಡದೆ ಒಂದೇ ಸಮನಾಗಿ ಪ್ರಾಧಾನ್ಯತೆ ನೀಡಿ ಅಭ್ಯಾಸ ಮಾಡಬೇಕು. ಉದ್ಯೋಗಕ್ಕಾಗಿ ಓದದೆ ಜ್ಞಾನಾರ್ಜನೆಗಾಗಿ ಓದಬೇಕು. ಆಗ ಉದ್ಯೋಗಾವಕಾಶಗಳೇ ನಿಮ್ಮನ್ನು ಹರಸಿ ಬರುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಟಿಎಂಇ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಪುಟ್ಟೇಗೌಡ, ನೇಗಿಲಯೋಗಿ ಸಂಸ್ಥೆಯ ಅಧ್ಯಕ್ಷ ಡಾ.ಎನ್.ಚಂದ್ರಶೇಖರ್, ಖಜಾಂಚಿ ವೈ.ಡಿ.ವೆಂಕಟೇಶ್, ಎಂಆರ್‌ಐಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ದಿವ್ಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: