ಕರ್ನಾಟಕಮೈಸೂರು

ಪುಸ್ತಕ ಪ್ರದರ್ಶನದಲ್ಲಿ ಮಾಹಿತಿ ನೀಡಲು ಕಾದಿವೆ ಖಾಲಿ ಖುರ್ಚಿಗಳು: ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಕೈಗನ್ನಡಿ

book-2-webದಸರಾ ಉತ್ಸವ ಬಂತೆಂದರೆ ಸಾಹಿತ್ಯ ಪ್ರಿಯರಿಗೆ ಅದೇನೋ ಒಂಥರಾ ಖುಷಿ. ತಮಗೆ ಬೇಕಾದಂತಹ ಪುಸ್ತಕಗಳನ್ನು ಕೊಂಡು ಓದಬಹುದು. ಇನ್ನಷ್ಟು ಸಾಹಿತ್ಯದ ಕುರಿತು, ಅಥವಾ ಮಹಾನ್ ವ್ಯಕ್ತಿಗಳ ಕುರಿತು ತಿಳಿದುಕೊಳ್ಳಬಹುದೆನ್ನುವ ಹಂಬಲ. ಅದೇನೋ ಸರಿ. ಆದರೆ ಪ್ರವೇಶ ದ್ವಾರದಲ್ಲೇ ನಿಮ್ಮನ್ನು ಖಾಲಿ ಮಳಿಗೆ ಸ್ವಾಗತಿಸಿದರೆ, ಸ್ವಾಗತಿಸುವವರು ಇಲ್ಲದಿದ್ದರೆ, ಮಾಹಿತಿ ಸಿಗದಿದ್ದರೆ ಯಾಕಾದರೂ ಇಲ್ಲಿಗೆ ಬಂದೆನೋ ಅಂತ ಒಮ್ಮೆ ಅನ್ನಿಸದೇ ಇರದು.

ಇಂತಹ ಒಂದು ಸನ್ನಿವೇಶ ಸೃಷ್ಟಿಯಾಗಿರುವುದು ಮೈಸೂರು ಕಾಡಾ ಕಚೇರಿಯಲ್ಲಿ ದಸರಾ ಉತ್ಸವ ಪ್ರಯುಕ್ತ ಆಯೋಜಿಸಲಾದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ. ದಸರಾ ಉತ್ಸವಕ್ಕೆ ಚಾಲನೆ ಸಿಕ್ಕ ಮರುದಿನವೇ ಭಾನುವಾರ. ಬಹುತೇಕ ಸಾಹಿತ್ಯಾಸಕ್ತರು ಪುಸ್ತಕ ಮಳಿಗೆಗೆ ಭೇಟಿ ನೀಡಬಹುದು ಎನ್ನುವ ಸಾಮಾನ್ಯ ಪರಿಜ್ಞಾನವೂ ಇಲ್ಲದ ಜಿಲ್ಲಾಡಳಿತ ಯಾರನ್ನೂ ಮಾಹಿತಿಗಾಗಲೀ, ಸ್ವಾಗತಕ್ಕಾಗಲೀ ನೇಮಿಸಿಲ್ಲ. ಒಳಗಡಿಯಿಟ್ಟಾಕ್ಷಣ ಸ್ವಾಗತಕಾರರ ಹಾಗೂ ಮಾಹಿತಿ ನೀಡುವವರ ಜಾಗದಲ್ಲಿ ನಾಲ್ಕು ಖಾಲಿ ಖುರ್ಚಿಗಳು ನಮ್ಮನ್ನು ಎದುರುಗೊಳ್ಳುತ್ತವೆ. ಹೋದ ತಕ್ಷಣವೇ ಹೋಗುವಾಗ ಇದ್ದ ಉತ್ಸಾಹಗಳೆಲ್ಲಾ  ಜರ್ರನೆ ಇಳಿದುಹೋದ ಅನುಭವ.

ಪುಸ್ತಕ ಪ್ರದರ್ಶನ ಮೇಳದಲ್ಲಿ ಮಾಹಿತಿ ನೀಡುವವರು ಇರಬೇಕಾದದ್ದು ಕರ್ತವ್ಯ. ಕನಿಷ್ಟ ಎಲ್ಲಿ ಏನೇನು ಸಿಗುತ್ತವೆ ಎನ್ನುವುದನ್ನು ಜನತೆಗೆ ತಿಳಿಸುವುದಕ್ಕಾದರೂ ಮಾಹಿತಿದಾರರನ್ನು ನೇಮಿಸಬೇಕು. ಈ ಬಾರಿ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಲು ಎಡವಿದೆ. ಅಷ್ಟೇ ಅಲ್ಲ ಬೆಂಗಳೂರು, ಮೈಸೂರು ಬಿಟ್ಟರೆ ಬೆರಳೆಣಿಕೆಯ ಪ್ರಕಾಶನಗಳು ಮಾತ್ರ ಹೊರಜಿಲ್ಲೆಗಳಿಂದ ಬಂದಿದೆ. ಮಂಗಳೂರಿನ ಶಾಂತಿ ಪ್ರಕಾಶನ, ಆರ್ಯ ಸಮಾಜ ಬಂಟ್ವಾಳ, ಸ್ನೇಹಲೋಕ ಪಬ್ಲಿಕೇಶನ್ಸ್ ಮುಧೋಳ, ಮಂಡ್ಯಜಿಲ್ಲೆಯ ಕೆಲವು ಮಳಿಗೆಗಳು ಮಾತ್ರ ಕಾಣಸಿಗುತ್ತದೆ. ಆದರೆ ಈ ಬಾರಿ ಮಕ್ಕಳನ್ನು ಸೆಳೆಯುವಂತಹ ಪುಸ್ತಕಗಳು ಕಾಣತ್ತಿಲ್ಲ. ಎಲ್ಲೋ ಒಂದೋ ಎರಡೋ ಮಳಿಗೆಗಳಲ್ಲಿ ಸಣ್ಣ ಕಥೆಗಳು, ಹಾಸ್ಯ ಪುಸ್ತಗಳು ಕಾಣಸಿಗುತ್ತವೆ. ಅಷ್ಟೆ ಅಲ್ಲ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳೂ ಕಡಿಮೆಯೇ. ಅಲ್ಲೊ ಇಲ್ಲೋ ಒಂದೊಂದು ಮಳಿಗೆಗಳಲ್ಲಿ ಕಂಡು ಬರುತ್ತದೆ.

‘ಸಿಟಿಟುಡೆ’ಯೊಂದಿಗೆ ಮಾತನಾಡಿದ ನವ ಕರ್ನಾಟಕ ಪಬ್ಲಿಕೇಷನ್ ಇನ್ ಚಾರ್ಜ್ ಯೋಗೇಶ್ ಜನರಲ್ಲಿ ಓದುವ ಆಕರ್ಷಣೆ ಕಡಿಮೆ ಆಗಿದೆ. ಆದರೆ ಕಳೆದ ಬಾರಿಗಿಂತ ಈ ವರ್ಷ ಜನರು ಬಂದಿದ್ದು ಕಡಿಮೆಯೇ. ಈ ಬಾರಿ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಲೇಖಕ ಡಾ.ಜಿ.ರಾಮಕೃಷ್ಣ ಅವರ ಋಗ್ವೇದ ಪ್ರವೇಶಿಕೆ ಐತಿಹ್ಯ ಮತ್ತು ವಾಸ್ತವ ಪುಸ್ತಕವನ್ನು ಕೇಳಿ ಒಯ್ಯುತ್ತಿದ್ದಾರೆ. ನಮ್ಮಲ್ಲಿ ಎಲ್ಲ ರೀತಿಯ ಪುಸ್ತಕಗಳ ಸಂಗ್ರಹವೂ ಇದೆ. ಹೊಸ ಪುಸ್ತಕ ಬಂದಾಗ ಹೇಳಿ ಅಂತ ಕೇಳಿಕೊಂಡು ಪುಸ್ತಕ ಕೊಂಡೊಯ್ಯುವವರು ಇದ್ದಾರೆ ಎಂದರು.

ಸಂಸ್ಕೃತ ಸಂಶೋಧನಾ ಸಂಸತ್‍ನ ಉಸ್ತುವಾರಿಯಾಗಿರುವ ಕುಮಾರ್ ಅವರು ಮಾತನಾಡಿ, “ನಾನು ಇದೇ ಮೊದಲ ಬಾರಿಗೆ ಇಲ್ಲಿ ಪುಸ್ತಕ ಮಳಿಗೆ ಹಾಕಿದ್ದೇನೆ. ಆದರೆ ಬರುವವರಿಗೆ ಮಾಹಿತಿ ನೀಡಲು ಜಿಲ್ಲಾಡಳಿತ ಯಾವ ವ್ಯವಸ್ಥೆಯನ್ನೂ ಕೈಗೊಂಡಿಲ್ಲ. ಕೇವಲ ಮಾಹಿತಿದಾರರು ಎನ್ನುವ ಫಲಕವನ್ನು ಹಾಕಿದೆ. ಅಲ್ಲಿರೋದು ಖಾಲಿ ಕುರ್ಚಿಗಳು ಹೀಗಾದರೆ ಜನರಿಗೆ ಮಳಿಗೆಯ ಕುರಿತು ಮಾಹಿತಿ ನೀಡುವವರು ಯಾರು?” ಎಂದು ಬೇಸರ ವ್ಯಕ್ತ ಪಡಿಸಿದರು.

ಸಾಹಿತ್ಯ ಸ್ತಂಭದ ಉಸ್ತುವಾರಿ ವಹಿಸಿರುವ ಜಯ ಅವರು ಮಾತನಾಡಿ “ನಾವು 7 ವರ್ಷದಿಂದ ದಸರಾ ಉತ್ಸವ ಪುಸ್ತಕ ಪ್ರದರ್ಶನದಲ್ಲಿ ಮಳಿಗೆ ಹಾಕುತ್ತಿದ್ದೇವೆ. ಆದರೆ ಈ ಬಾರಿ ಜನರ ಭೇಟಿ ಸ್ವಲ್ಪ ಕಡಿಮೆಯೇ ಇದೆ” ಎಂದರು.

ಈ ಬಾರಿ ಕೆಲವು ಮಳಿಗೆಗಳಲ್ಲಿ ಕುವೆಂಪು, ಅನಕೃ, ಎಸ್.ಎಲ್.ಭೈರಪ್ಪ, ಪೂರ್ಣಚಂದ್ರ ತೇಜಸ್ವಿಯವರಂತಹ ಸಾಹಿತಿಗಳ ಪುಸ್ತಕಗಳು ಕಂಡು ಬಂದರೆ  ಇನ್ನು ಕೆಲವು ಮಳಿಗೆಗಳಲ್ಲಿ ಅಡುಗೆ, ಹಸ್ತ ಸಾಮುದ್ರಿಕ, ಜ್ಯೋತಿಷ್ಯ ಪುಸ್ತಕಗಳು ಕಾಣ ಸಿಗುತ್ತವೆ. ಕೆಲವೇ ಪುಸ್ತಕಗಳು ಮಾತ್ರ ಗೋಚರಿಸುತ್ತಿವೆ. ಆದರೆ ಜಿಲ್ಲಾಡಳಿತ ಮಾಹಿತಿ ನೀಡಲು ಮಾತ್ರ ಯಾರನ್ನೂ ಅಲ್ಲಿ ನೇಮಿಸದೆ ಖಾಲಿ ಖುರ್ಚಿಗಳನ್ನು ಮಾತ್ರ ಸ್ವಾಗತಕ್ಕೆ ಬಿಟ್ಟಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎನ್ನುವುದರಲ್ಲಿ ಎರಡು ಮಾತಿಲ್ಲ.

– ಸುಹಾಸಿನಿ ಹೆಗಡೆ

Leave a Reply

comments

Related Articles

error: