ದೇಶಪ್ರಮುಖ ಸುದ್ದಿ

ಬಡತನವನ್ನೇ ಹೈಲೈಟ್ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಪ್ರಮುಖಸುದ್ದಿ,ದೇಶ(ಕೇರಳ) ಮೇ.19:- ಮಾಧ್ಯಮಗಳು ಬಡತನವನ್ನೇ ಹೈಲೈಟ್  ಮಾಡಿದ್ದರಿಂದ ನೊಂದ ಪ್ರತಿಭಾವಂತ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ಮೃತಳನ್ನು ಮಾಲೂರು ನಿವಾಸಿ ರಫ್ಸೀನಾ ಎಂದು ಗುರುತಿಸಲಾಗಿದೆ. ಪ್ಲಸ್ ಟು ಪರೀಕ್ಷೆಯಲ್ಲಿ 1200 ಅಂಕಗಳಲ್ಲಿ 1180 ಗರಿಷ್ಠ  ಅಂಕಗಳನ್ನು ಪಡೆದಿದ್ದಳು. ಈ ಸಂದರ್ಭದಲ್ಲಿ  ಈಕೆ ಕಲಿಯುತ್ತಿದ್ದ ಶಿವಪುರಂ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ಬುಧವಾರ ಈಕೆಯ ಮನೆಗೆ ಬಂದು ಅಭಿನಂದನೆ ಸಲ್ಲಿಸಿದ್ದರು. ಎಲ್ಲರೂ ಅಭಿನಂದನೆ ಸಲ್ಲಿಸಿ ಹೋದ ನಂತರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ.

ಮನೆಯಲ್ಲಿ ಬಡತನವಿದ್ದರೂ ಪ್ಲಸ್ ಟು ಪರೀಕ್ಷೆಯಲ್ಲಿ ರಫ್ಸೀನಾ ಉತ್ತಮ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದವು. ತನ್ನ ಮನೆಯಲ್ಲಿ ಬಡತನವಿರುವ ವಿಷಯವನ್ನು ರಫ್ಸೀನಾ ತಮ್ಮ ಸಹಪಾಠಿಗಳಲ್ಲಿಯೂ ಹೇಳಿರಲಿಲ್ಲ. ತನ್ನ ಮನೆಯ ಪರಿಸ್ಥಿತಿ ಯಾರಿಗೂ ತಿಳಿಯಬಾರದು ಎಂದು ಈ ಬಾಲಕಿ ಬಯಸಿದ್ದಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಪತ್ರಿಕೆಗಳಲ್ಲಿ ಆ ಸುದ್ದಿ ಪ್ರಕಟವಾದಾಗ ಹೆಚ್ಚಿನವರಿಗೆ ರಫ್ಸೀನಾ ಮನೆಯಲ್ಲಿ ಬಡತನವಿದೆ ಎಂಬ ವಿಷಯ ಗೊತ್ತಾಗಿದೆ . ಅಭಿನಂದನೆ ಸಲ್ಲಿಸಲು ಬಂದ ಗಣ್ಯರು ರಫ್ಸೀನಾಳಿಗೆ ಸಹಾಯ ಭರವಸೆಯನ್ನೂ ನೀಡಿದ್ದರು. ಆದರೆ ರಫ್ಸೀನಾಳಿಗೆ ಮಾಧ್ಯಮಗಳು ತನ್ನ  ಮನೆಯ ಫೋಟೊ ಪ್ರಕಟಿಸಿದ್ದು ಇಷ್ಟವಾಗಿರಲಿಲ್ಲ. ಇದರಿಂದಾಗಿ ಮನನೊಂದು ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. – (ವರದಿ:ಕೆಸಿಐ,ಎಸ್.ಎಚ್)

Leave a Reply

comments

Related Articles

error: