
ಕರ್ನಾಟಕಪ್ರಮುಖ ಸುದ್ದಿ
ದಲಿತರ ಮನೆಯಲ್ಲಿ ಹೋಟೆಲ್ ಊಟ ಮಾಡಿದ ಯಡಿಯೂರಪ್ಪ ವಿರುದ್ದ ದೂರು ದಾಖಲು
ರಾಜ್ಯ, ಪ್ರಮುಖ ಸುದ್ದಿ,(ಮಂಡ್ಯ) ಮೇ 20: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದ ನಿವಾಸಿಯೊಬ್ಬರು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಮಂಡ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೆಳ್ಳೂರಿನ ವೆಂಕಟೇಶ್. ಡಿ ದೂರು ನೀಡಿರುವ ವ್ಯಕ್ತಿ. ಬಿ.ಎಸ್.ಯಡಿಯೂರಪ್ಪನವರು ದಲಿತರ ಮನೆಯಲ್ಲಿ ಊಟ ಮಾಡುತ್ತೇನೆಂದು ಹೇಳಿ ಮೀಡಿಯಾಗಳಲ್ಲಿ ಪುಕಾರ ಎಬ್ಬಿಸಿ, ಚಿತ್ರದುರ್ಗದ ಕೆಳಕೋಟೆ ಏರಿಯಾದ ರುದ್ರಮುನಿ ಅವರ ಮನೆಗೆ ತೆರಳಿ ಹೋಟೇಲ್ ನಿಂದ ಊಟ ತರಿಸಿಕೊಂಡು ತಿಂದು ದಲಿತರ ಮನೆಯ ಆಹಾರ ತಿನ್ನುವುದು ಕೀಳು ಎಂಬ ತಪ್ಪು ಮೇಲ್ಪಂಕ್ತಿಯನ್ನು, ಕೆಟ್ಟ ಸಂದೇಶವನ್ನು ರವಾನಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ವೆಂಕಟೇಶ್ ಅವರು ನೀಡಿರುವ ದೂರಿನನ್ವಯ, ಇದು ಅಸ್ಪೃಶ್ಯತೆಯ ಆಚರಣೆಗೆ ಸಮನಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಜಾತಿ ತಾರತಮ್ಯದಿಂದಾಗಿ ಈಗಾಗಲೇ ಹಲವಾರು ಮರ್ಯಾದೆ ಹತ್ಯೆಗಳು ಜರುಗಿವೆ. ಈ ರಾಜಕೀಯ ನಾಯಕರು ಹಾಕಿಕೊಟ್ಟಂತಹ ಸದರಿ ಮೇಲ್ಪಂಕ್ತಿ ಮಂಡ್ಯ ಜಿಲ್ಲೆಯ ದಲಿತರ ಮೇಲಿನ ದೌರ್ಜನ್ಯವನ್ನು ಹೆಚ್ಚು ಮಾಡುವುದರಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿನ ದಲಿತರನ್ನು ಈ ಕೆಟ್ಟ ಮೇಲ್ಪಂಕ್ತಿ ಭೇದಿಸುವುದರಿಂದ ಸದರಿ ದೂರು ಮಂಡ್ಯ ಜಿಲ್ಲೆ ಠಾಣಾ ವ್ಯಾಪ್ತಿಗೂ ವಿಸ್ತರಿಸುತ್ತದೆ. ಆದ ಕಾರಣ ಈ ದೂರನ್ನು ಸ್ವೀಕರಿಸಿ ಸದರಿ ಆರೋಪಿಯ ಮೇಲೆ ಕಾನೂನಿನ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. (ವರದಿ: ಎಸ್.ಎನ್, ಎಲ್.ಜಿ)