ಪ್ರಮುಖ ಸುದ್ದಿಮೈಸೂರು

ರಾಷ್ಟ್ರೀಯ ಹೆದ್ದಾರಿ: ವಾರ್ಷಿಕ ಯೋಜನೆಯಡಿ ವಿವಿಧ ಕಾಮಗಾರಿ

ಮೈಸೂರು, ಮೇ 20: ಮೈಸೂರು ಹೊರ ವರ್ತುಲ ರಸ್ತೆಯು ಒಟ್ಟು 41.535 ಕಿ.ಮೀ. ಉದ್ದದಷ್ಟಿದ್ದು, ಹಾಲಿ ಹುಣಸೂರು ರಸ್ತೆಯಲ್ಲಿ ಇಣಕಲ್ ಗ್ರಾಮದ ಬಳಿಯ ಹೊರ ವರ್ತುಲ ರಸ್ತೆಯ ಜಂಕ್ಷನ್‍ನಿಂದ ರಾಷ್ಟ್ರೀಯ ಹೆದ್ದಾರಿ-275 ರ ಕಿ.ಮೀ. 211.25 ರಿಂದ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಬಳಿಯಿರುವ ಹೊರ ವರ್ತುಲ ಜಂಕ್ಷನ್ ವರೆಗೆ ಅಂದರೆ ರಾಷ್ಟ್ರೀಯ ಹೆದ್ದಾರಿ-275ರ ಕಿ.ಮೀ. 224.100 ವರೆಗೆ  ಹೊರ ವರ್ತುಲ ರಸ್ತೆಯು 9.00 ಕಿ.ಮೀ. ಉದ್ದವಿದ್ದು, ಇದನ್ನು ರಾಷ್ಟ್ರೀಯ ಹೆದ್ದಾರಿ -275ರ ಬೈಪಾಸ್ ಎಂದು ಪರಿಗಣಿಸಿ ರಾಷ್ಟ್ರೀಯ ಹೆದ್ದಾರಿ ವಲಯದ ವತಿಯಿಂದ 2017-18ನೇ ಸಾಲಿನ ವಾರ್ಷಿಕ ಯೋಜನೆಯಡಿ 82 ಕೋಟಿ ರೂ. ಅಂದಾಜಿನಡಿಯಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ. ಮಹದೇವಪ್ಪ ಅವರು ಶನಿವಾರ ತಿಳಿಸಿದರು.

ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಬಳಿ ಹೊರ ವರ್ತುಲ ರಸ್ತೆಯ ಜಂಕ್ಷನ್‍ನಿಂದ ಅಂದರೆ ರಾಷ್ಟ್ರೀಯ ಹೆದ್ದಾರಿ 150ಎ ( ಈ ರಸ್ತೆಯ ರಾಷ್ಟ್ರೀಯ ಹೆದ್ದಾರಿ -275 ನ್ನು ಶ್ರೀರಂಗಪಟ್ಟಣದಿಂದ ಮೇಲು ವ್ಯಾಪಿಸಿ ಮುಂದುವರೆದಿರುತ್ತದೆ) ಯ ಕಿ.ಮೀ 629.424 ರಿಂದ ಹೊರವರ್ತುಲ ರಸ್ತೆಯ ಎ.ಪಿ.ಎಂ.ಸಿ. ಯಾರ್ಡ್ ಬಳಿಯಿರುವ ನಂಜನಗೂಡು ರಸ್ತೆಯ ಜಂಕ್ಷನ್ ವರೆಗೆ ಕಿ.ಮೀ.646.324 ವರೆಗೆ ಅಂದರೆ ಸುಮಾರು 18.90 ಕಿ.ಮೀ ಉದ್ದದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ-150ಎ ರ ಬೈಪಾಸ್ ರಸ್ತೆಯನ್ನಾಗಿ ರಾಷ್ಟ್ರೀಯ ಹೆದ್ದಾರಿ ವಲಯದ ವತಿಯಿಂದ 2017-18 ನೇ ಸಾಲಿನ ವಾರ್ಷಿಕ ಯೋಜನೆಯಡಿ 95.00 ಕೋಟಿ ರೂ. ಅಂದಾಜಿನಡಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.

ಮೈಸೂರು-ಜಯಪುರ-ಹೆಚ್.ಡಿ.ಕೋಟೆ-ಬಾವಲಿ-ಕೇರಳ ರಾಜ್ಯದ ಮಾನಂದವಾಡಿ-ಕಲ್ಲಪೆಟ್ಟ ರಸ್ತೆಯನ್ನು (91 ಕಿ.ಮೀಗಳು) ತಾತ್ವಿಕವಾಗಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅನುಮೋದಿಸಿದೆ. ಸದರಿ ರಸ್ತೆಯನ್ನು ಹುಣಸೂರು ರಸ್ತೆಯ ಇಣಕಲ್ ಗ್ರಾಮದ ಬಳಿಯ ಹೊರವರ್ತುಲ ರಸ್ತೆಯ ಸೇರಿಕೆಯಿಂದ ಪ್ರಾರಂಭಿಸಿ ಶ್ರೀರಾಂಪುರ ಗ್ರಾಮದ ಪರಿಮಿತಿಯಲ್ಲಿ ಹೊರ ವರ್ತುಲ ರಸ್ತೆಯ ಜಂಕ್ಷನ್ ಮೂಲಕ ಅಭಿವೃದ್ಧಿಪಡಿಸಲು ಸರ್ವೇ ಕಾರ್ಯಗಳನ್ನು ಕೈಗೊಂಡು ಪೂರ್ಣಗೊಳಿಸಿದ ನಂತರ ಹೊರ ವರ್ತುಲ ರಸ್ತೆಯ ಈ ಭಾಗವನ್ನು ಮೂಡ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ವಲಯಕ್ಕೆ ಹಸ್ತಾಂತರಿಸಿಕೊಳ್ಳಲಾಗುವುದು.
ಶ್ರೀ ರಾಂಪುರ ಗ್ರಾಮದ ಪರಿಮಿತಿಯಲ್ಲಿ ಹೊರ ವರ್ತುಲ ರಸ್ತೆಯ ಜಂಕ್ಷನ್‍ನಿಂದ ಹೊರವರ್ತುಲ ರಸ್ತೆಯ ಎ.ಪಿ.ಎಂ.ಸಿ. ಯಾರ್ಡ್ ಬಳಿಯಿರುವ ನಂಜನಗೂಡು ರಸ್ತೆಯ ಜಂಕ್ಷನ್‍ವರೆಗೆ ಸುಮಾರು 4.335 ಕಿ.ಮೀ.ಗಳಷ್ಟು ರಸ್ತೆಯು ಹಾಲಿ ಮೂಡ ಬಳಿಯೇ ಉಳಿಯಲಿದ್ದು ಕೇಂದ್ರ ಭೂ ಸಾರಿಗೆ ಮಂತ್ರಾಲಯದಿಂದ ಅನುಮೋದನೆಗೊಂಡ ನಂತರ ಹಸ್ತಾಂತರಿಸಿಕೊಳ್ಳಲಾಗುವುದೆಂದು ಅವರು ವಿಮಾನ ನಿಲ್ದಾಣದಲ್ಲಿ ಹೇಳಿದರು. (ವರದಿ:ಎಸ್.ಎನ್,ಎಲ್.ಜಿ)

Leave a Reply

comments

Related Articles

error: