ನಮ್ಮೂರುಮೈಸೂರು

ಮೈಸೂರಿನಲ್ಲಿ ಬೃಹತ್ ರೈತ ಸಮಾವೇಶ ಅ.5ರಂದು

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್‍ ನೀಡಿದ ಆದೇಶವನ್ನು ವಿರೋಧಿಸಿ ಮೈಸೂರಿನಲ್ಲಿ ಅ.5ರಂದು ಬೃಹತ್ ರೈತ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.

ನಗರದ ಮಹಾರಾಜ ಕಾಲೇಜು ಮೈದಾನದ ಯುವ ದಸರಾ ವೇದಿಕೆಯಲ್ಲೇ ಬೆಳಗ್ಗೆ 11ಕ್ಕೆ ಸಮಾವೇಶ ನಡೆಯಲಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಬಿನಿ ರೈತ ಹಿತರಕ್ಷಣಾ ಸಮಿತಿ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ, ಕಾವೇರಿ ನಿರ್ವಹಣಾ ಮಂಡಳಿ ರಚನೆಯಿಂದಾಗುವ ಸಂಕಷ್ಟಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸಮಾವೇಶದ ಹಿನ್ನೆಲೆಯಲ್ಲಿ 143 ಹಳ್ಳಿಗಳಲ್ಲಿ ಪ್ರಚಾರ ಮಾಡಲಾಗಿದ್ದು, 200ಕ್ಕೂ ಹೆಚ್ಚು ವಾಹನಗಳಲ್ಲಿ ರೈತರನ್ನು ಕರೆತರಲಾಗುತ್ತಿದೆ. ಕಾರ್ಯಕ್ರಮಕ್ಕೆ ಬರುವವರು ಊಟದ ವ್ಯವಸ್ಥೆಯನ್ನು ಅವರೇ ಮಾಡಿಕೊಂಡು ಬರಲಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ಸಮಾವೇಶವನ್ನು ಅಂತಾರಾಷ್ಟ್ರೀಯ ಜಲತಜ್ಞ ರಾಜೇಂದ್ರ ಸಿಂಗ್ ಉದ್ಘಾಟನೆ ಮಾಡಲಿದ್ದು, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾಂ, ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ಕಾವೇರಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ, ಕರವೇ ಅಧ್ಯಕ್ಷ ಪ್ರವೀಣ್‍ ಶೆಟ್ಟಿ, ಕಾವೇರಿ ಕ್ರಿಯಾ ಸಮಿತಿಯ ಪ.ಮಲ್ಲೇಶ, ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಾಬಾಗೌಡ ಪಾಟೀಲ್ ಭಾಗವಹಿಸಲಿದ್ದಾರೆ.

Leave a Reply

comments

Related Articles

error: