ಕರ್ನಾಟಕ

ನಾಗರಿಕ ಹಕ್ಕುಗಳ ಜಾಗೃತಿ ಕಾರ್ಯಕ್ರಮ : ಅಸಮಾನತೆ ಬಗ್ಗೆ ದಿನೇಶ್ ಹೆಗ್ಡೆ ಆತಂಕ

ರಾಜ್ಯ,(ಮಡಿಕೇರಿ) ಮೇ 20: ಭ್ರಷ್ಟರು, ಶ್ರೀಮಂತರು ಹಾಗೂ ಸ್ವಾರ್ಥ ರಾಜಕಾರಣಿಗಳ ಒಕ್ಕೂಟ ನಮ್ಮನ್ನು ಆಳುತ್ತಿರುವುದರಿಂದ ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತಿದೆಯೆಂದು ಮಂಗಳೂರಿನ ಹಿರಿಯ ನ್ಯಾಯವಾದಿ, ಮಾನವಹಕ್ಕು ಹೋರಾಟಗಾರ ದಿನೇಶ್ ಹೆಗ್ಡೆ ಉಳೇಪಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಹೆರಿಟೇಜ್ ಹೋಟೆಲ್ ಸಭಾಂಗಣದಲ್ಲಿ ನಡೆದ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎ.ಪಿ.ಸಿ.ಆರ್)ಕೊಡಗು ವಿಭಾಗ ಏರ್ಪಡಿಸಿದ್ದ ನಾಗರಿಕ ಹಕ್ಕುಗಳ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ನಾಗರಿಗ ಹಕ್ಕುಗಳ ಅರಿವು ಪ್ರತಿಯೊಬ್ಬರಿಗೂ ಘನತೆಯ ಬದುಕನ್ನು ನೀಡುತ್ತದೆ. ನಾಗರಿಕರ ಹಕ್ಕುಗಳ ಸಂರಕ್ಷಣೆ ಎಂಬುದು ಆಯಾ ಸರಕಾರಗಳ ಕರ್ತವ್ಯವಾಗಿದೆ. ಜನರು ಸರಕಾರವನ್ನು ನಂಬಿರುತ್ತಾರೆ. ಸರಕಾರಗಳು ಜನರ ಮೂಲಭೂತ ಹಕ್ಕುಗಳನ್ನು ಒದಗಿಸಬೇಕು. ಮತ್ತೊಬ್ಬರ ಬಗೆಗಿನ ಕಾಳಜಿಯೇ ಹೋರಾಟದ ಸ್ಪೂರ್ತಿ. ಹೋರಾಟಗಾರರು ಎಂದೂ ಆಮಿಷಗಳಿಗೆ ಬಲಿಯಾಗಬಾರದು. ಹೋರಾಟಗಳು ವೃತ್ತಿಪರವಾದಲ್ಲಿ ಭ್ರಷ್ಟಾಚಾರ ಹೆಚ್ಚುತ್ತದೆ. ಹೋರಾಟಗಾರರು ಸಮಾಜಕ್ಕೆ ಮಾದರಿಯಾಗಬೇಕು. ರಾಜಕಾರಣಿಗಳೂ ಭ್ರಷ್ಟ ಅಧಿಕಾರಿಗಳೂ ಇಂದು ವ್ಯವಸ್ಥೆಯ ಸೌಲಭ್ಯಗಳನ್ನು ಅನುಭವಿಸುವಲ್ಲಿ ಮುಂದೆ ಇದ್ದಾರೆ. ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದೇ ಇರುವುದರಿಂದ ಜನರು ಸರಕಾರವನ್ನಾಗಲೀ ಅಧಿಕಾರಿಗಳನ್ನಾಗಲೀ ನಂಬುತ್ತಿಲ್ಲ. ಹಕ್ಕುಗಳು ಎಂದೂ ಕೇಳಿಪಡೆಯಬೇಕಾದದ್ದಲ್ಲ. ಹೋರಾಟದ ಚಿಂತನೆಗಳ ಕಿಡಿ ಅರಳಬೇಕು ಮತ್ತು ಸಂಘಟಿತ ತಾಂತ್ರಿಕತೆಯಿಂದ ಹೋರಾಟಗಳು ಯಶಸ್ವಿಯಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಬೆಂಗಳೂರಿನ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಹಾಯಕರಾದ ಅಕ್ಬರಲಿ ಮಾತನಾಡಿ, ನಾಗರಿಕರ ಕ್ರಿಯಾಶೀಲತೆ ಕಡಿಮೆಯಾದಲ್ಲಿ ಕಾನೂನುಗಳು ಮತ್ತು ಕಾಯ್ದೆಗಳು ನಿಷ್ಪ್ರಯೋಜನವೆನಿಸುತ್ತವೆ. ಭ್ರಷ್ಟಮುಕ್ತ ಪಾರದರ್ಶಕ ವ್ಯವಸ್ಥೆ ತರುವಲ್ಲಿ ನಾಗರಿಕರ ಪಾಲು ಬಹುಮುಖ್ಯ. ನಾಗರಿಕರು ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಶಕ್ತಿಶಾಲಿಗಳಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯು ಸಮಾಜದ ಕಟ್ಟಕಡೆಯ ಪ್ರಜೆಗೂ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ತಿಳಿಸಿದರು.

ಮಡಿಕೇರಿ ವಕೀಲರ ಸಂಘದ ಉಪಾಧ್ಯಕ್ಷರಾದ ಕೆ.ಡಿ.ದಯಾನಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾಗರಿಕರು ಇತರರ ಹಕ್ಕುಗಳನ್ನು ಗೌರವಿಸಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಿದಲ್ಲಿ ಅಸಮಾನತೆ ಕಡಿಮೆಯಾಗುತ್ತದೆ . ಹಕ್ಕುಗಳ ಅರಿವು ತಮ್ಮ ವ್ಯಕ್ತಿತ್ವವನ್ನು ಬೆಳೆಸಲು ಸಹಾಯಕವಾಗುತ್ತದೆ. ಹೋರಾಟಗಾರರನ್ನು ಹಾದಿ ತಪ್ಪಿಸುವಲ್ಲಿ ರಾಜಕಾರಣಿಗಳು ಮುಂಚೂಣಿಯಲ್ಲಿದ್ದಾರೆ.ಹೋರಾಟಗಾರರು ಆಮಿಷಗಳಿಗೆ ಬಲಿಯಾಗದೆ ನಿಸ್ವಾರ್ಥತೆಯಿಂದ ಸಮಾಜವನ್ನು ಮುನ್ನಡೆಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎ.ಪಿ.ಸಿ.ಆರ್.ಕೊಡಗು ವಿಭಾಗದ ಅಧ್ಯಕ್ಷರಾದ ವಕೀಲ ಕೆ.ಎಂ.ಕುಂಞಬ್ದುಲ್ಲ ಅಧಿಕಾರಿಗಳು ಅಧಿಕಾರದ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದಲ್ಲಿ ಹಕ್ಕುಗಳ ಉಲ್ಲಂಘನೆ ಉಂಟಾಗುವುದಿಲ್ಲ. ಅಧಿಕಾರಿಗಳು ತಮ್ಮ ಅಧಿಕಾರದ ವ್ಯಾಪ್ತಿ ಮೀರಿದಾಗ ಹೋರಾಟಗಳು ಅನಿವಾರ್ಯವಾಗುತ್ತದೆ. ನಾಗರಿಕ ಹಕ್ಕುಗಳ ಪ್ರಜ್ಞೆಯ ಕೊರತೆಯಿಂದಾಗಿ ಸಮಾಜದಲ್ಲಿ ಉಂಟಾಗುವ ತಾರತಮ್ಯ ಕೊನೆಗಾಣಲು ಜಾಗೃತಿ ಕಾರ್ಯಕ್ರಮಗಳು ನೆರವಾಗಬೇಕು ಎಂದರು.
ಎ.ಪಿ.ಸಿ.ಆರ್.ಜಿಲ್ಲಾ ಕಾರ್ಯದರ್ಶಿ ವಿ.ಎಸ್.ರಾಯ್ ಡೇವಿಡ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಕೆ.ಅಬ್ದುಲ್ ರೆಹೆಮಾನ್ ಕಾರ್ಯಕ್ರಮ ನಿರೂಪಿಸಿದರೆ, ಸಿ.ಹೆಚ್.ಅಫ್ಸರ್ ವಂದಿಸಿದರು. (ವರದಿ:ಕೆ.ಸಿ.ಐ,ಎಲ್.ಜಿ)

Leave a Reply

comments

Related Articles

error: