ಕ್ರೀಡೆಪ್ರಮುಖ ಸುದ್ದಿ

ಪ್ರಶಸ್ತಿಗಾಗಿ ಮುಂಬೈ-ಪುಣೆ ಹೋರಾಟ: ಯಾರಿಗೆ 10ನೇ ಆವೃತ್ತಿಯ ಐಪಿಎಲ್ ಕಿರೀಟ

ಪ್ರಮಖ ಸುದ್ದಿ, (ಕ್ರೀಡೆ) ಹೈದರಾಬಾದ್ ಮೇ 20: 10ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)  ಅಂತಿಮಘಟ್ಟ ತಲುಪಿದ್ದು, ಫೈನಲ್ ಪಂದ್ಯ ಎರಡು ಬಾರಿಯ ಚಾಂಪಿಯನ್ ಬಲಿಷ್ಠ ಮುಂಬೈ ಇಂಡಿಯನ್ಸ್ ಹಾಗೂ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಭಾನುವಾರ ನಡೆಯಲಿದೆ.

ಕ್ವಾಲಿಫಯರ್ ಪಂದ್ಯದಲ್ಲಿ ಮುಂಬೈ ಬಗ್ಗುಬಡಿದು ನೇರವಾಗಿ ಪ್ರವೇಶ ಪಡೆದಿರುವ ಪುಣೆ, ಹಾಗೂ ಕ್ವಾಲಿಫಯರ್ ಪಂದ್ಯದಲ್ಲಿ ಸೋತು ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ನಿರಾಯಾಸ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿರುವ ಮುಂಬೈ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಲೀಗ್ ಪಂದ್ಯ ಹಾಗೂ ಕ್ವಾಲಿಫಯರ್ ಪಂದ್ಯದಲ್ಲಿ ಸೋಲನುಭವಿಸಿ ಪೆಟ್ಟುತಿಂದ ಹುಲಿಯಂತಾಗಿರುವ ಮುಂಬೈ ಫೈನಲ್ ನಲ್ಲಿ ಗೆದ್ದು ಸೇಡು ತೀರಿಸಿಕೊಂಡು ಮೂರನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಲು ಸನ್ನದ್ಧವಾಗಿದೆ. ಇತ್ತ ಕಳೆದ ಐಪಿಎಲ್ ನಲ್ಲಿ ಲೀಗ್ ಹಂತದಲ್ಲಿಯೇ ಪಂದ್ಯಾವಳಿಯಿಂದ ಹೊರಬಿದ್ದಿದ್ದ ಪುಣೆ ಈ ಬಾರಿ ದಿಟ್ಟ ಹೋರಾಟದ ಮೂಲಕ ಫೈನಲ್ ಪ್ರವೇಶಿಸಿದ್ದು ಮೊದಲ ಬಾರಿ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ತವಕದಲ್ಲಿದೆ. ಎರಡೂ ತಂಡಗಳು ಬಲಿಷ್ಠವಾಗಿದ್ದು, ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ತಂಡವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಮುಂಬೈ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಮತೋಲನದಿಂದ ಕೂಡಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ರೋಹಿತ್ ಶರ್ಮ ದೊಡ್ಡ ಇನ್ನಿಂಗ್ಸ್ ಕಟ್ಟದೇ ಇರುವುದು ತಲೇನೋವಾಗಿ ಪರಿಣಮಿಸಿದೆ. ಆರಂಭಿಕ ಪಾರ್ಥೀವ್ ಪಟೇಲ್ ಉತ್ತಮ ಆರಂಭ ಒದಗಿಸುವಲ್ಲಿ ಸಫಲರಾಗುತ್ತಿದ್ದರಾದರೂ ಅದನ್ನು ಬೃಹತ್ ಮೊತ್ತವಾಗಿ ಪರಿವರ್ತಿಸುತ್ತಿಲ್ಲ. ಇನ್ನು ಸಿಮನ್ಸ್ ಮೊದಲೆರಡು ಪಂದ್ಯಗಳಲ್ಲಿ ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಉಳಿದ ಅಬ್ಬರಿಸಿಲ್ಲ. ಪಾಂಡ್ಯಾ ಸಹೋದರರು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ವಿಂಡೀಸ್ ದೈತ್ಯ ಪೊಲಾರ್ಡ್ ಯಾವ ಸಮಯದಲ್ಲಿ ಬೇಕಾದರೂ ಸಿಡಿಯಬಹುದು. ಇನ್ನು ಬೌಲಿಂಗ್ ವಿಭಾಗದಲ್ಲಿ ಬುಮ್ರಾ, ಕರಣ್ ಶರ್ಮ, ಮಲಿಂಗಾ, ಜಾನ್ಸನ್ ಉತ್ತಮ ಲಯದಲ್ಲಿದ್ದಾರೆ.

ಪುಣೆ ತಂಡ ನಾಯಕ ಸ್ವೀವ್ ಸ್ಮಿತ್ ಹಾಗೂ ಅಜಿಂಕ್ಯಾ ರಹಾನೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಮಧ್ಯಮ ಕ್ರಮಾಂಕ ಅಷ್ಟಾಗಿ ಬಲಿಷ್ಠವಾಗಿಲ್ಲ. ಕೆಳಕ್ರಮಾಂಕದಲ್ಲಿ ಎಂ.ಎಸ್.ಧೋನಿ ಆಸರೆಯಾಗುತ್ತಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಉನಾದ್ಕಟ್, ವಾಸಿಂಗ್ಟನ್ ಸುಂದರ್, ಡ್ಯಾನ್ ಕ್ರಿಶ್ಚನ್ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ.

ಪಂದ್ಯ ಭಾನುವಾರ ರಾತ್ರಿ 8 ಗಂಟೆಗೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಪ್ರಶಸ್ತಿಗಾಗಿ ಬಿಗ್ ಫೈಟ್  ನಡೆಯಲಿದೆ. (ವರದಿ ಬಿ.ಎಂ)

 

Leave a Reply

comments

Related Articles

error: