ಮೈಸೂರು

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುಸಿದ ಫಲಿತಾಂಶ : ಸದಸ್ಯರಿಂದ ಅಧಿಕಾರಿಗಳ ತರಾಟೆ

ಮೈಸೂರು, ಮೇ.22:- ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಭಾಂಗಣದಲ್ಲಿ  ಸಾಮಾನ್ಯ ಸಭೆ ನಡೆಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷತೆ ನಯೀಮಾ ಸುಲ್ತಾನಾ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆ ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ತೀವ್ರ ಕುಸಿತ ಕಂಡಿರುವುದರಿಂದ  ಸದಸ್ಯರು ಅಧಿಕಾರಿಗಳನ್ನು  ತೀವ್ರ ತರಾಟೆಗೆ ತೆಗೆದುಕೊಂಡರು.
ಹೆಚ್.ಡಿ.ಕೋಟೆ ತಾಲೂಕಿನ ಜಿಲ್ಲಾ ಪಂಚಾಯತ್ ಸದಸ್ಯ ಸಿ. ವೆಂಕಟಸ್ವಾಮಿ ಮಾತನಾಡಿ ನಮ್ಮ ತಾಲೂಕಿನಲ್ಲಿ 25 ಪ್ರೌಢ ಶಾಲೆಯಲ್ಲಿ 94 ಶಿಕ್ಷಕರ ಕೊರತೆ ಇದ್ದು, ಈ ವಿಚಾರವಾಗಿ ಸುಮಾರು 10 ತಿಂಗಳಿಂದಲೂ ಸಾಮಾನ್ಯ ಸಭೆಯಲ್ಲಿ ಮಂಡಿಸುತ್ತ ಬಂದಿದ್ದೇವೆ. ಇದುವರೆಗೂ ಕೂಡ ಶಿಕ್ಷಕರನ್ನು ನೇಮಕ ಮಾಡಿಲ್ಲ. ಇಲ್ಲಿಗೆ 94 ಶಿಕ್ಷಕರ ಅವಶ್ಯಕತೆಯಿದೆ. ಕೇವಲ 7 ಜನರನ್ನು ಮಾತ್ರ ನೇಮಕ ಮಾಡಲಾಗಿದೆ. ಅದೇ ಬೇರೆ ತಾಲೂಕುಗಳಿಗೆ ಅಗತ್ಯವಿರುವ ಶಿಕ್ಷಕರನ್ನು ನೇಮಕ ಮಾಡಿದ್ದಾರೆ ಇದರ ಹುನ್ನಾರ ಏನು ಎಂದು ಪ್ರಶ್ನಿಸಿದರು.  ಇದು ಸಿಎಂ ತವರು ಜಿಲ್ಲೆ. ಶಿಕ್ಷಣ ಸಚಿವರು ಕೂಡ ಇಲ್ಲಿಯೇ ಇದ್ದಾರೆ ಆದರೆ ಪ್ರಯೋಜನವೇನು?  ಕಳೆದ ಬಾರಿ ಎಸ್ ಎಸ್ ಎಲ್ ಸಿ ಯಲ್ಲಿ ಜಿಲ್ಲೆಗೆ ಮೈಸೂರು 8 ನೇ ಸ್ಥಾನದಲ್ಲಿತ್ತು ಆದರೇ ಈ ಬಾರಿ 21 ನೇ ಸ್ಥಾನಕ್ಕೆ ಬಂದು ತಲುಪಿದೆ. ಈ ಫಲಿತಾಂಶ ಕ್ಕೆ ಕಾರಣ ಏನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ ಈ ಬಾರಿ ಸೂಕ್ತ ಕ್ರಮ ಕೈಗೊಂಡು ಪರೀಕ್ಷೆ ನೆಡೆಸಿದ್ದೇವೆ ಎನ್ನುತ್ತಾರೆ. ಹಾಗಾದರೇ ಪ್ರಥಮ, ದ್ವಿತೀಯ ಸ್ಥಾನಗಳಿಸಿದ ಜಿಲ್ಲೆಗಳು ಮಕ್ಕಳಿಗೆ ಪರೀಕ್ಷೆಯಲ್ಲಿ ಕಾಫಿ ಮಾಡಲು ಬಿಟ್ಟಿದ್ದಾರೆಯೇ?  ಇಲ್ಲಿನ ಶಿಕ್ಷಕರು ಏನು ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಬರ ಬರುತ್ತಾ ರಾಯರ ಕುದುರೆ ಕತ್ತೆಯಾದಂತಾಗುತ್ತಿದೆ. ಸಿಎಂ ತವರು ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಈ ಬಾರಿಯ ಫಲಿತಾಂಶ ಕುಸಿದಿದೆ. ಇದಕ್ಕೆ ನಮಗೂ ನಿಮಗೂ ನಾಚಿಕೆಯಾಗಬೇಕು. ಇನ್ನಾದರೂ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕು ಎಂದರು.
ಸಾಮಾನ್ಯ ಸಭೆಯಲ್ಲಿ  ಹಲವು ಸದಸ್ಯರು ಗೈರು ಎದ್ದು ಕಾಣುತ್ತಿತ್ತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ  ನಟರಾಜ್,  ಸದಸ್ಯರಾದ ಪುಷ್ಪ ಅಮರ್ ನಾಥ್, ಬೀರಿ ಹುಂಡಿ ಬಸವಣ್ಣ ಮತ್ತಿತರರು ಹಾಜರಿದ್ದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: