
ಕರ್ನಾಟಕಪ್ರಮುಖ ಸುದ್ದಿ
ಮಂಗಳೂರು ವಿಮಾನ ದುರಂತಕ್ಕೆ ಬರೋಬ್ಬರಿ ಏಳು ವರುಷ : ಮರೆಯಲಾಗದ ನೋವು
ಪ್ರಮುಖಸುದ್ದಿ,ರಾಜ್ಯ(ಮಂಗಳೂರು) ಮೇ.22;- ಆ ದಿನ ಮಾತ್ರ ಯಾರಿಗೂ ಮರೆಯಲು ಸಾಧ್ಯವಿಲ್ಲ. ಮರೆಯಬೇಕೆಂದರೂ ಮತ್ತೆ ಮತ್ತೆ ನೋವಿನ ನೆನಪು ಮರುಕಳಿಸುತ್ತದೆ. ಅಂದು ಮೋಡ ಕವಿದ ವಾತಾವರಣ ಜೊತೆಗೆ ಭಾರೀ ಮಳೆ. ಬೆಳಿಗ್ಗೆ ಎದ್ದು ಟಿವಿ ಆನ್ ಮಾಡಿದವರಿಗೆ ಭಾರೀ ಆಘಾತವೊಂದು ಕಾದಿತ್ತು. ಬೆಳ್ಳಂಬೆಳಿಗ್ಗೆ 6.15ರ ಸುಮಾರಿಗೆ ರನ್ ವೇ ದಾಟಿ ಸ್ವಲ್ಪವೇ ಮುಂದೆ ಚಲಿಸಿದ ವಿಮಾನ ಕಂದಕಕ್ಕೆ ಬಿದ್ದು ಸುಟ್ಟು ಬೂದಿಯಾಗಿತ್ತು. ಅದರಲ್ಲಿರುವ ಪ್ರಯಾಣಿಕರಲ್ಲಿ 158 ಮಂದಿ ಸಾವನ್ನಪ್ಪಿದ್ದರು.
ಇವೆಲ್ಲ ನಡೆದಿದ್ದು 2010ರ ಮೇ.22ರಂದು. ಇದು ಇಡೀ ಮಂಗಳೂರಿಗರನ್ನೇ ಬೆಚ್ಚಿ ಬೀಳಿಸಿತ್ತು. ಮುಂಜಾನೆ ದುಬೈನಿಂದ ಹೊಸ ಹೊಸ ಕನಸುಗಳನ್ನು ಹೊತ್ತು ತಂದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಇಳಿಸುವ ವೇಳೆ ರನ್ ವೇ ದಾಟಿ ಮುಂದೆ ಚಲಿಸಿ ಕಣಿವೆಗೆ ಬಿದ್ದು ಸ್ಪೋಟಗೊಂಡು 158 ಮಂದಿ ಸಜೀವ ದಹನವಾಗಿದ್ದರು. ಎಂಟು ಮಂದಿ ಪವಾಡ ಸದೃಶ ಪಾರಾಗಿದ್ದರು. ಮೃತರ ಪೈಕಿ 146ಮಂದಿಯನ್ನು ಸಂಬಂಧಿಕರು ಗುರುತಿಸಿ ಮನೆಗೆ ಕೊಂಡೊಯ್ದಿದ್ದರು. ಉಳಿದ ಶವಗಳು ಸಂಪೂರ್ಣ ಸುಟ್ಟು ಕರಕಲಾಗಿ ಗುರುತು ಸಿಗದೇ ಅಲ್ಲೇ ಸಾಮೂಹಿಕ ಅಂತ್ಯ ಸಂಸ್ಕಾರವನ್ನು ಮಾಡಲಾಗಿತ್ತು. ಘಟನೆ ನಡೆದು ಬರೋಬ್ಬರಿ ಏಳು ವರ್ಷಗಳೇ ಕಳೆದರೂ ಮಂಗಳೂರು ಜನತೆ ಮಾತ್ರ ಇದನ್ನು ಇನ್ನೂ ಮರೆತಿಲ್ಲ. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅವರನ್ನೇ ನಂಬಿಕೊಂಡ ಹಲವು ಕುಟುಂಬಗಳು ಅಪಘಾತದಲ್ಲಿ ಮಡಿದ ಮನೆಯವರನ್ನು ನೆನೆದು ಈಗಲೂ ಕಣ್ಣೀರಾಗುತ್ತಾರೆ. ಅವರ ಮನಸ್ಸಿನಿಂದ ಆ ನೋವು ಮರೆಯಾಗಲೇ ಇಲ್ಲ.
ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಕೂಳೂರು-ತಣ್ಣೀರುಬಾವಿ ರಸ್ತೆಯಲ್ಲಿರುವ ಸ್ಮಾರಕ ಉದ್ಯಾನವನದಲ್ಲಿ ಗಣ್ಯರು ಸೋಮವಾರ ಶ್ರದ್ಧಾಂಜಲಿ ಅರ್ಪಿಸಿದರು. ಸಚಿವರಾದ ಬಿ. ರಮಾನಾಥ ರೈ, ಯು.ಟಿ. ಖಾದರ್ ಸೇರಿದಂತೆ ಹಲವು ಗಣ್ಯರು ಹಾಗೂ ಜಿಲ್ಲಾಡಳಿತ ಶ್ರದ್ಧಾಂಜಲಿ ಅರ್ಪಿಸಿತು. (ವರದಿ:ಕೆ.ಎಸ್,ಎಸ್.ಎಚ್)