ದೇಶಪ್ರಮುಖ ಸುದ್ದಿ

ಕಾಶ್ಮೀರದಲ್ಲಿ ನಿರಂತರ ಹಿಂಸಾಚಾರ : ರಾಷ್ಟ್ರಪತಿ ಆಳ್ವಿಕೆ ಸಾಧ್ಯತೆ ?

ದೇಶ (ಪ್ರಮುಖ ಸುದ್ದಿ) ನವದೆಹಲಿ, ಮೇ 22 : ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಪರಿಸ್ಥಿತಿ ತಿಳಿಯಾಗುವವರೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡುವಂತೆ ರಾಜ್ಯಪಾಲ ಎ.ಎನ್. ವೋಹ್ರಾ ಶಿಫಾರಸು ಮಾಡಿದ್ದಾರೆ.

ಒಂದೆಡೆ ಜನಗಳಿಂದ ಸೈನಿಕರ ಮೇಲೆ ಕಲ್ಲು ತೂರಾಟ ನಡೆಯುತ್ತಿದ್ದರೆ ಮತ್ತೊಂದೆಡೆ ಪಾಕಿಸ್ತಾನ ಬೆಂಬಲಿತ ಉಗ್ರವಾದಿಗಳ ಉಪಟಳ ಹೆಚ್ಚಾಗಿದೆ. ಆದ್ದರಿಂದ ಪರಿಸ್ಥಿತಿ ತಿಳಿಯಾಗುವವರೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕೆಂದು ಶಿಫಾರಸಿನಲ್ಲಿ ಹೇಳಲಾಗಿದೆ.

ಕಳೆದ ಮೂರು ದಿನಗಳಿಂದ ಕಣಿವೆ ರಾಜ್ಯದ ಸ್ಥಿತಿಗತಿ ಕುರಿತಂತೆ ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರು ಹಿರಿಯ ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸಿದ್ದಾರೆ. ಭದ್ರತಾ ಸಲಹೆಗಾರ ಅಜಿತ್ ಧೋವಲ್, ಹಿರಿಯ ಸೇನಾಧಿಕಾರಿಗಳು, ರಾಜ್ಯಪಾಲರು ಭಾಗವಹಿಸಿದ್ದ ಈ ಮಾತುಕತೆಯಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿತ್ತು.

ರಾಜ್ಯದಲ್ಲಿ ಸದ್ಯದ ಸ್ಥಿತಿ ಮುಂದುವರಿದರೆ ರಾಷ್ಟ್ರಪತಿ ಆಳ್ವಿಕೆ ತರುವುದು ಒಂದೇ ಪರಿಹಾರ ಮಾರ್ಗ. ಆಗ ಭದ್ರತಾ ಪಡೆಗಳಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬಹುದು. ಭಯೋತ್ಪಾದಕರು ಹಾಗೂ ಪ್ರತಿಭಟನಾನಿರತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಅದೇ ಸರಿ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ರಾಜ್ಯದಲ್ಲಿ ಉಂಟಾಗಿರುವ ಆಡಳಿತಾರೂಢ ಪಿಡಿಪಿ- ಬಿಜೆಪಿ ನೇತೃತ್ವದ ಸರ್ಕಾರ ಪರಿಸ್ಥಿತಿ ಹತೋಟಿಗೆ ತರಲು ವಿಫಲವಾಗಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ. ಆದ್ದರಿಂದ ಇಂಥ ಸ್ಥಿತಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ತರುವುದೇ ಸರಿ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ರಾಜ್ಯಪಾಲ ವೋಹ್ರಾ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಸದ್ಯ ಮುಂದಿರುವ ಏಕೈಕ ಪರಿಹಾರ ಎಂದು ಗೃಹ ಇಲಾಖೆಗೆ ವರದಿ ನೀಡಿದ್ದಾರೆಂದು ತಿಳಿದು ಬಂದಿದೆ.

ಆದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿದರೆ ಪ್ರತಿಪಕ್ಷಗಳು ಇದನ್ನೇ ಚುನಾವಣಾ ಅಸ್ತ್ರ ಮಾಡಿಕೊಳ್ಳಬಹುದೆಂಬ ಭೀತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಡುತ್ತಿದೆ ಎನ್ನಲಾಗಿದ್ದು, ರಾಜ್ಯಪಾಲರ ವರದಿ ಕಾರ್ಯಗತವಾಗುವುದೇ ಎಂಬ ಪ್ರಶ್ನೆ ಎದುರಾಗಿದೆ. ಕಾಶ್ಮೀರ ಪರಿಸ್ಥಿತಿ ಒಂದೆಡೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದರೆ, ಮತ್ತೊಂದೆಡೆ ರಾಜಕೀಯ ಪಕ್ಷಗಳ ತಿಕ್ಕಾಟ ಕೂಡ ತಾರಕ್ಕೇರತೊಡಗಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಆಗ್ರಹಿಸುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಕತ್ತಲು ಕವಿದಿದ್ದು, ಬೇರೇನೂ ಕಾಣಿಸುತ್ತಿಲ್ಲ. ಕಾಶ್ಮೀರದಲ್ಲಿನ ಪರಿಸ್ಥಿತಿ ನಿಯಂತ್ರಣ ಮೀರಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಈ ಮಟ್ಟಕ್ಕೆ ಹಾಳಾಗಿದ್ದರೂ, ಮೆಹಬೂಬಾ ಮುಫ್ತಿ ಮಾತ್ರ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ. ಇದಕ್ಕಿಂತ ನಾಚಿಕೆಗೇಡಿತನ ಬೇರೆಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್‍ನಾಥ್ ಸಿಂಗ್ -ಅಜಿತ್ ಧೋವಲ್ ಸಭೆ :

ಕಾಶ್ಮೀರ ಹಿಂಸಾಚಾರ ಕುರಿತಂತೆ ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರಾಷ್ಟ್ರೀಯಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಪರಿಸ್ಥಿತಿ ಕುರಿಂತೆ ಅವಲೋಕನ ನಡೆಸಿದ್ದಾರೆಂದು ತಿಳಿದುಬಂದಿದೆ.   ಸಭೆಯಲ್ಲಿ ಉನ್ನತಾಧಿಕಾರಿಗಳು ಕಾಶ್ಮೀರ ಪರಿಸ್ಥಿತಿ ಕುರಿತಂತೆ ವರದಿ ಗಳನ್ನು ನೀಡಿದ್ದಾರೆ. ಅಲ್ಲದೆ, ಪರಿಸ್ಥಿತಿ ನಿಯಂತ್ರಣಕ್ಕೆ ಈಗಾಗಲೇ ತೆಗೆದುಕೊಂಡಿರುವ ಕ್ರಮದ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಪ್ರತ್ಯೇಕತಾವಾದಿಗಳ ಜೊತೆಗೆ ಶಾಂತಿಯುತ ಮಾತುಕತೆ ನಡೆಸುವ ಕುರಿತಂತೆಯೂ ಮಾತುಕತೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸಂವಿಧಾನದ ಅಡಿಯಲ್ಲಿ ಯಾರೊಂದಿಗೆ ಬೇಕಾದರೂ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ರಾಜನಾಥ್ ಅವರು ತಿಳಿಸಿದ್ದಾರೆ. ಆದರೆ, ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದಿದ್ದಾರೆ.

-ಎನ್.ಬಿ.ಎನ್.

Leave a Reply

comments

Related Articles

error: