ನಮ್ಮೂರುಮೈಸೂರು

ಇಂದಿನಿಂದ ಅ.7ರವರೆಗೆ ಸಂಭ್ರಮದ ಯುವ ದಸರಾ

ದಸರಾ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಯುವ ದಸರಾ ಅ.3ರಿಂದ 7ರವರೆಗೆ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಯುವ ದಸರಾ ಉಪ ಸಮಿತಿ ವಿಶೇಷಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣವರ್ ತಿಳಿಸಿದರು.

ಭಾನುವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 3ರಂದು ಸಂಜೆ 5.3೦ಕ್ಕೆ ಯುವ ದಸರಾಗೆ ಚಾಲನೆ ದೊರೆಯಲಿದ್ದು, ಸಚಿವರಾದ ಹೆಚ್.ಎಸ್. ಮಹದೇವಪ್ರಸಾದ್, ಸಂತೋಷ್ ಲಾಡ್ ಉಪಸ್ಥಿತರಿರಲಿದ್ದಾರೆ. ಹಿರಿಯ ಕಲಾವಿದ ಶಿವರಾಜ್‌ಕುಮಾರ್ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದು, ಶಾಸಕ ವಾಸು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದ್ದು, ಯುವ ಸಂಭ್ರಮದಿಂದ ಆಯ್ಕೆಯಾದ 36 ತಂಡಗಳು ಪ್ರದರ್ಶನ ನೀಡಲಿವೆ. ಏಳು ದಿನಗಳ ಕಾಲ ನಡೆಯುವ ಕಾರ್ಯಕ್ರಮ ಪ್ರತಿದಿನ ಸಂಜೆ 6 ಗಂಟೆಯಿಂದ ಆರಂಭವಾಗಲಿದ್ದು 6ರಿಂದ 7ಗಂಟೆವರೆಗೆ ವಿದ್ಯಾರ್ಥಿಗಳು, 7ರಿಂದ 8ರವರೆಗೆ ಸ್ಥಳೀಯ ಕಲಾವಿದರು. 8ರಿಂದ 10ರವರೆಗೆ ಪ್ರಮುಖ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ಯಾವುದಕ್ಕೆ ಎಷ್ಟೆಷ್ಟು: ಕಾರ್ಯಕ್ರಮಕ್ಕೆ ಅಂದಾಜು 1  ರಿಂದ 1 ಕೋಟಿ 10 ಲಕ್ಷ ಖರ್ಚಾಗಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರದರ್ಶನ ನೀಡಲಿರುವ ಕಲಾವಿದರಿಗೆ 49 ಲಕ್ಷ, ಸಿಸಿ ಟಿವಿಗೆ 9೦ ಸಾವಿರ, ಪ್ರಿಂಟಿಂಗ್ ವೆಚ್ಚ 9೦ ಸಾವಿರ, ಜಾಹೀರಾತು ಹಾಗೂ ಪ್ರಚಾರ ವೆಚ್ಚ 9೦ ಸಾವಿರ, ಆಹಾರಕ್ಕೆ 5 ಲಕ್ಷ, ನಿರೂಪಕರಿಗೆ 1 ಲಕ್ಷ ನೀಡಲಿದ್ದು ಫೋಟೋ ಹಾಗೂ ವಿಡಿಯೋಗೆ 9೦ ಸಾವಿರ ಖರ್ಚು ಮಾಡಲಿವೆ. ಟಿವಿಎಸ್ ಕಾರ್ಖಾನೆಯವರು 8.5 ಲಕ್ಷ, ಕೆನರಾ ಬ್ಯಾಂಕ್ 3.5 ಲಕ್ಷ ಹಾಗೂ ಎಸ್‌ಬಿಐ ನೆನಪಿನ ಕಾಣಿಕೆಯ ಪ್ರಾಯೋಜಕತ್ವ ವಹಿಸಿಕೊಂಡಿದೆ. ಹಾಗೆಯೆ ಯುವ ಸಂಭ್ರಮಕ್ಕೆ 39 ಲಕ್ಷ 33 ಸಾವಿರ ಖರ್ಚಾಗಿದೆ ಎಂದು ವಿವರಿಸಿದರು.

ಯಾರಿಗೆ ಎಷ್ಟೆಷ್ಟು: ದುಂದುವೆಚ್ಚದ ಬದಲಿಗೆ ಮಿತ ವ್ಯಯದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಯಾವು ಕಲಾವಿದರಿಗೂ 1೦ ಲಕ್ಷಕ್ಕಿಂತ ಹೆಚ್ಚು ಸಂಭಾವನೆ ನೀಡಿಲ್ಲ. ಕನ್ನಡದ ರಘು ಮುಖರ್ಜಿ ತಂಡಕ್ಕೆ 8.5 ಲಕ್ಷ ನೀಡಿದ್ದು ಇದನ್ನು ಟಿವಿಎಸ್ ಕಂಪನಿ ವಹಿಸಿಕೊಂಡಿದೆ. ಶಾಲ್ಮಲಿ ಖೋಲ್ಗಡೆ ತಂಡಕ್ಕೆ 9 ಲಕ್ಷ, ಟಿಪ್ಪು ಮತ್ತು ತಂಡಕ್ಕೆ 8.5 ಲಕ್ಷ, ಕೋಕ್ ಸ್ಟುಡಿಯೋಗೆ 8.5 ಲಕ್ಷ, ಜಾವೇದ್ ಅಲಿ ತಂಡಕ್ಕೆ 8.5 ಲಕ್ಷ, ಬಿನ್ನಿ ದಯಾಳ್ ತಂಡಕ್ಕೆ 13.5 ಲಕ್ಷ ನೀಡಿದ್ದು, ಇದರಿಂದ 10 ಲಕ್ಷ ಮಾತ್ರ ಉಪ ಸಮಿತಿಯಿಂದ ನೀಡಲಾಗಿದ್ದು, ಉಳಿದ 3.5 ಲಕ್ಷ ಪ್ರಾಯೋಜಕರು ನೀಡಿದ್ದಾರೆ ಎಂದು ಹೇಳಿದರು.

ಬಿಗಿ ಪೊಲೀಸ್ ಭದ್ರತೆ: ಯುವಕರೆ ಹೆಚ್ಚು ಸೇರುವ ಕಾರ್ಯಕ್ರಮ ಇದಾದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 8೦೦ ಮಂದಿ ಪೊಲೀಸರನ್ನು ನಿಯೋಜಿಸಲಾಗಿದ್ದು, 4೦ ಸಿಸಿಟಿವಿ ಅಳವಡಿಸಲಾಗಿದೆ. ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಹಾಗೂ ಮಫ್ತಿಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ವಿಐಪಿ, ವಿವಿಐಪಿ ಸೇರಿದಂತೆ ಜನಪ್ರತಿನಿಧಿಗಳಿಗೆ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 15 ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಮೈದಾನದ ವಿವಿಧೆಡೆ 6 ಎಲ್‌ಇಡಿ ಸ್ಕ್ರೀನ್ಸ್, ಸೌಂಡ್ ಸಿಸ್ಟಮ್, ಡಿಲೆ ಸ್ಪೀಕರ್ ಅವಳವಡಿಸಲಾಗಿದೆ ಎಂದು ತಿಳಿಸಿದರು.

ಮಹಾರಾಜ ಕಾಲೇಜಿನ ಆವರಣದಲ್ಲಿ ಜರುಗಲಿರುವ ಯುವ ದಸರಾವನ್ನು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್, ಸಚಿವರಾದ ಹೆಚ್.ಎಸ್.ಮಹದೇವ ಪ್ರಸಾದ್, ಸಂತೋಷ್ ಎಸ್.ಲಾಡ್, ತನ್ವೀರ್ ಸೇಠ್, ಮಹಾಪೌರ ಬಿ.ಎಲ್.ಭೈರಪ್ಪ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕ ವಾಸು, ಜಿ.ಪಂ. ಅಧ್ಯಕ್ಷೆ ನಯಿಮಾ ಸುಲ್ತಾನ ಹಾಗೂ ಸಂಸದರಾದ ಪ್ರತಾಪ್ ಸಿಂಹ, ಧ್ರುವನಾರಾಯಣ ಹಾಗೂ ಶಾಸಕರು ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಉಪಸಮಿತಿ ಕಾರ್ಯಾಧ್ಯಕ್ಷ ಎಂ.ಆರ್.ರಾಜೇಶ್, ಕಾರ್ಯದರ್ಶಿ ಜಿ.ಎಸ್.ಸೋಮಶೇಖರ್, ವಿಶೇಷ ಸಲಹೆಗಾರ ಎಂ.ಎನ್.ನಟರಾಜ್ ಹಾಜರಿದ್ದರು.

Leave a Reply

comments

Related Articles

error: