ಮೈಸೂರು

ವಿದ್ಯಾರ್ಥಿಗಳು ಪ್ರಶಸ್ತಿಗೆ ಸೀಮಿತವಾಗಬಾರದು: ರಾಜಲಕ್ಷ್ಮಿ ಶ್ರೀಧರ್

ಮೈಸೂರು, ಮೇ ೨೨: ಪ್ರಶಸ್ತಿಗಳು ಕೇವಲ ಪ್ರೋತ್ಸಾಹಕಗಳಾಗಿದ್ದು ವಿದ್ಯಾರ್ಥಿಗಳು ಪ್ರಶಸ್ತಿಗೆ ಸೀಮಿತವಾಗದೆ ದೊಡ್ಡ ಮಟ್ಟದ ಸಾಧನೆ ಮಾಡಬೇಕು ಎಂದು ಜಿ.ರಾಜಲಕ್ಷ್ಮಿಶ್ರೀಧರ್ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಶ್ರೀ ನಾದಬ್ರಹ್ಮ ಸಂಗೀತ ಸಭಾದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಬಾಲಶ್ರೀ, ಯುವಶ್ರೀ ಹಾಗೂ ಸಾಧನಶ್ರೀ ಪ್ರಶಸ್ತಿ ಪ್ರದಾನ ಮತ್ತು ಭರತನಾಟ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಪ್ರಶಸ್ತಿ ಪಡೆದುಕೊಳ್ಳುವುದೇ ದೊಡ್ಡ ಸಾಧನೆಯಲ್ಲ. ಅದಕ್ಕೂ ಮಿಗಿಲಾದ ಸಾಧನೆ ನಮ್ಮ ಮುಂದಿದೆ. ವಿದ್ಯಾರ್ಥಿಗಳು ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಮೂಲ್ಯ ಸಮಯವನ್ನು ಸ್ನೇಹಿತರೊಂದಿಗೆ ಕಾಲಹರಣ ಮಾಡಿ ಕಳೆದುಕೊಳ್ಳದೆ ಸಾಹಿತ್ಯ, ಕಲೆ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪೋಷಕರು ಮಕ್ಕಳು ಅವರ ಇಷ್ಟದ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ನೀಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಇದೇ ವೇಳೆ ಬಾಲಶ್ರೀ ಪ್ರಶಸ್ತಿಯನ್ನು ಭೂಮಿಕ ಅರುಣ್, ಎಸ್.ನಿಶಾಂತ್, ಎಸ್.ಆರುಷಿ, ಅಮೂಲ್ಯ ನಾರಾಯಣ್, ವಿ.ಯಶಸ್ವಿನಿ, ಮಯಾಂಕ್ ಆರ್.ವಸಿಷ್ಠ, ಸಿ.ವಿ.ಅಪ್ರಮೇಯ, ಜಿ.ಸೃಷ್ಟಿಗೆ ನೀಡಿದರೆ, ಯುವಶ್ರೀ ಪ್ರಶಸ್ತಿಯನ್ನು ಮಹಿಮ, ಪ್ರಿಯಾಂಕ್ ಶೇಟ್, ತೇಜಶ್ರೀ ಎನ್.ಮೂರ್ತಿ, ಎಸ್.ಅಶ್ವಿನ್, ಬಿ.ಪೂಜಾ, ಕವಿರಾಜ್ ಪೃಥ್ವಿ, ಆರ್.ಧನುಷ್ ಗೌಡ ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಗೀತಗಾರ ಡಾ.ಆರ್.ಎಸ್. ನಂದಕುಮಾರ್, ಮೈಸೂರು ಸಾಹಿತ್ಯ ವೇದಿಕೆ ಅಧ್ಯಕ್ಷೆ ಡಾ.ಸಿ.ತೇಜೋವತಿ, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಎಂ.ಬಿ.ಸಂತೋಷ್, ಪ್ರಧಾನ ಕಾರ್ಯದರ್ಶಿ ಎಂ.ಎನ್.ಜಯಂತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: