ದೇಶಪ್ರಮುಖ ಸುದ್ದಿ

ಬ್ಯಾನ್‌ ಆದ ನೋಟುಗಳಿಂದ ವಿದ್ಯುತ್ ಉತ್ಪಾದನೆ ಪ್ರಯತ್ನ : ಸಮಗ್ರ ವರದಿ ನೀಡುವಂತೆ ಪ್ರಧಾನಿ ಕಚೇರಿ ಸೂಚನೆ

ದೇಶ (ಪ್ರಮುಖ ಸುದ್ದಿ) ಭುವನೇಶ್ವರ್‌, ಮೇ 23 : ಹಳೆಯ 500 ಮತ್ತು 1000 ರೂ. ಮುಖ ಬೆಲೆಯ ನೋಟುಗಳ ನಿಷೇಧದಿಂದಾಗಿ ಬ್ಯಾಂಕುಗಳಿಗೆ ವಾಪಸ್ ಬಂದ ನೋಟುಗಳನ್ನು ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದ ಕೇಂದ್ರ ಸರ್ಕಾರಕ್ಕೆ ಇದೀಗ ಒಡಿಶಾದ ಯುವಕನೊಬ್ಬ ಹೊಸ ಐಡಿಯಾ ಕೊಟ್ಟಿದ್ದಾನೆ.

ಹಳೇ 500, 1000 ನೋಟ್ ಬಳಸಿ ಒಡಿಶಾದ ಯುವಕನೊಬ್ಬ ವಿದ್ಯುತ್ ಉತ್ಪಾದಿಸುವ ವಿಧಾನವನ್ನು ಕಂಡುಹಿಡಿದಿದ್ದಾನೆ. ಈ ಸುದ್ದಿ ಪ್ರಧಾನಿ ಕಚೇರಿಗೂ ತಲುಪಿದ್ದು ವರದಿ ನೀಡುವಂತೆ ಪ್ರಧಾನಿ ಕಾರ್ಯಾಲಯ ಒಡಿಶಾ ಸರ್ಕಾರಕ್ಕೆ ಸೂಚಿಸಿದೆ.

ಲಚಮನ್ ದುಂಡಿ ಎಂಬ ಒಡಿಶಾದ ನೌಪಡಾ ಜಿಲ್ಲೆಯ 17 ವರ್ಷದ ಯುವಕ, 500 ರ ನೋಟ್‌ನಿಂದ 5 ವೋಲ್ಟ್‌ ವಿದ್ಯುತ್‌ ಉತ್ಪಾದಿಸಬಹುದು ಎಂದು ಹೇಳುತ್ತಿದ್ದಾನೆ. “ಹಳೆಯ 500 ರ ನೋಟಿನ ಮೇಲಿನ ಸಿಲಿಕಾನ್‌ ಬಳಸಿ ವಿದ್ಯುತ್ ಉತ್ಪಾದಿಸಿದ್ದೇನೆ. ನೋಟ್‌ ಅನ್ನು ಸ್ವಲ್ಪ ಹರಿದಾಗ ಸಿಲಿಕಾನ್ ಲಭ್ಯವಾಗಲಿದ್ದು ಅದನ್ನು ಎಲೆಕ್ಟ್ರಿಕ್ ತಂತಿಯ ನೆರವಿನಿಂದ ಒಂದು ಟ್ರಾನ್ಸ್‌ಫಾರ್ಮರ್‌‌ಗೆ ಅನುಸಂಧಾನಗೊಳಿಸಬೇಕು. ನಂತರ ಸಿಲಿಕಾನ್‌ ಮೇಲೆ ಸೂರ್ಯನ ಕಿರಣಗಳನ್ನು ಬೀಳುವಂತೆ ಮಾಡಿದರೆ ವಿದ್ಯುತ್ ಉತ್ಪಾದನೆ ಆಗುತ್ತದೆ. ಸಿಲಿಕಾನ್ ಪ್ಲೇಟ್‌ನಿಂದ ಉತ್ಪಾದನೆಗೊಳ್ಳುವ ವಿದ್ಯುತ್‌ ಅನ್ನು ಟ್ರಾನ್ಸ್‌ಫಾರ್ಮರ್‌‌ ಶೇಖರಿಸುತ್ತೆ” ಎಂಬುದು ಹೊಸ ಆವಿಷ್ಕಾರದ ಸಾರಾಂಶ.

ಬ್ಯಾನ್ ಆದ ನೋಟುಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಬಹುದಾದ ಈ ಐಡಿಯಾ ಪ್ರಧಾನಿ ಕಚೇರಿಯ ಗಮನ ಸೆಳೆದಿದೆ. ಈ ಸಂಬಂಧ ಸಮಗ್ರ ವರದಿ ಕಳುಹಿಸುವಂತೆ ಪ್ರಧಾನಿ ಕಚೇರಿ ಮೇ 12ರಂದು ಒಡಿಶಾ ಸರ್ಕಾರಕ್ಕೆ ಸಲಹೆ ಮಾಡಿದೆ. ವರದಿ ತಯಾರಿಸುವಂತೆ ಒಡಿಶಾ ಸರ್ಕಾರ ತನ್ನ ಅಧಿಕಾರಿಗಳಿಗೆ ಸೂಚಿಸಿದೆ.

-ಎನ್.ಬಿ.ಎನ್.

Leave a Reply

comments

Related Articles

error: