ಮೈಸೂರು

ಮಹಿಳಾ ಸಬಲೀಕರಣ ಜಾಥಾಗೆ ಚಾಲನೆ

ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಆಯೋಜಿಸಿದ್ದ ಮಹಿಳಾ ಸಬಲೀಕರಣ ಜಾಥಾಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೇವಲ ಪುರುಷರಿಗೆ ಪ್ರಾಧಾನ್ಯತೆ ನೀಡುವ ಕಾಲವೊಂದಿತ್ತು. ಆದರೆ ಇಂದು ಆ ಕಾಲ ಬದಲಾಗಿ ದೇಶದ ಎಲ್ಲ ಪ್ರಮುಖ ರಂಗಗಳಲ್ಲೂ ಮಹಿಳೆ ತನ್ನ ಛಾಪು ಮೂಡಿಸುತ್ತಿದ್ದಾಳೆ. ಸಬಲೀಕರಣದ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾಳೆ. ಪುರುಷರಷ್ಟೇ ಸರಿಸಮನಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾಳೆ. ಆದರೂ ಕೆಲವೊಂದು ಕಡೆ ಮಹಿಳೆಯರ ಮೇಲೆ, ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು ಇದನ್ನು ತಡೆಗಟ್ಟಬೇಕಿದೆ. ಮಹಿಳೆಯರು ಇಂತಹ ದೌರ್ಜನ್ಯಗಳಿಗೆ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಮುನ್ನುಗ್ಗಬೇಕಿದೆ ಎಂದು ಕರೆ ನೀಡಿದರು.

ದಸರಾ ಅಂಗವಾಗಿ ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ಜಾಥಾ ಆಯೋಜಿಸಿರುವುದು ಖುಷಿ ನೀಡಿದೆ. ನಾನಾ ವಿಭಾಗಗಳಲ್ಲಿ ಅದ್ವಿತೀಯ ಸಾಧನೆಗೈದಿರುವವರು ಜಾಥಾದಲ್ಲಿ ಪಾಲ್ಗೊಂಡಿದ್ದಾರೆ. ಇಂತಹ ಇನ್ನಷ್ಟು ಕಾರ್ಯಕ್ರಮಗಳು ಆಗಬೇಕಿದೆ. ಕಾವೇರಿ ಜಲವಿವಾದ ರಾಜ್ಯಕ್ಕೆ ಕವಿದಿರುವ ಮೋಡದಂತಿದ್ದು ಶೀಘ್ರವೇ ಕರಗಲಿದೆ. ಹಾಗಾಗಿ ಯಾವುದೇ ಆತಂಕ ಇಲ್ಲದೆ ದಸರಾ ಕಾರ್ಯಕ್ರಮವನ್ನು ನಡೆಸಬಹುದು ಎಂದು ಭರವಸೆಯಿಂದ ನುಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಿ.ರಂದೀಪ್, ಮಹಿಳೆಯರ ಸಬಲೀಕರಣ ದೃಷ್ಟಿಯಿಂದ, ಜಾಗೃತಿ ಮೂಡಿಸುವ ಸಲುವಾಗಿ ಈ ಜಾಥಾ ಆಯೋಜಿಸಲಾಗಿದೆ. ಇಂದು ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಮುಂದಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಕೆಎಎಸ್, ಐಎಎಸ್ ಪರೀಕ್ಷೆಗಳಲ್ಲೂ ಮಹಿಳಾ ಅಭ್ಯರ್ಥಿಗಳು ಮುಂದಿದ್ದಾರೆ. ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕಾರ್ಯಗಳು ಆಗಬೇಕಿದೆ ಎಂದು ಹೇಳಿದರು.

ಜಾಥಾದಲ್ಲಿ ಪೊಲೀಸರು, ವಕೀಲರು, ನರ್ಸ್‌ಗಳು, ಎನ್‌ಸಿಸಿ ವಿದ್ಯಾರ್ಥಿಗಳು, ಸ್ವಸಹಾಯ ಸಂಘದ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಹೋಂಗಾರ್ಡ್‌ಗಳು ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು. ಕುದುರೆ ಏರಿ ಬಂದ ಕಿತ್ತೂರು ರಾಣಿ ಚೆನ್ನಮ್ಮ ಎಲ್ಲರ ಗಮನ ಸೆಳೆದಳು. ಅಲ್ಲದೆ ಒನಕೆ ಓಬವ್ವ ಕೂಡ ಜಾಥಾದಲ್ಲಿ ಪಾಲ್ಗೊಂಡಿದ್ದಳು. ಅರಮನೆ ಮುಂಭಾಗದಿಂದ ಆರಂಭವಾದ ಜಾಥಾ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದಿಕ್ ಕಾಲೇಜು ವೃತ್ತದ ಮಾರ್ಗವಾಗಿ ಜೆಕೆ ಮೈದಾನ ತಲುಪಿತು.

Leave a Reply

comments

Related Articles

error: