ದೇಶಪ್ರಮುಖ ಸುದ್ದಿ

ರಜನಿಕಾಂತ್ ರಾಜಕೀಯಕ್ಕೆ ಬರಲ್ಲ : ಹಳೆ ಗೆಳೆಯ ಶತ್ರುಘ್ನ ಸಿನ್ಹಾ ಖಡಕ್ ಮಾತು

ರಾಜ್ಯ (ಪ್ರಮುಖ ಸುದ್ದಿ) ಮುಂಬೈ, ಮೇ 23 : ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತು ಚರ್ಚೆ ನಡೆಯುತ್ತಿರುವ ಕಾರಣ ಅವರ ಹಳೆಯ ಗೆಳೆಯ ಶತೃಘ್ನ ಸಿನ್ಹಾ ಅವರನ್ನು ಮಾತನಾಡಿಸಿದಾಗ ಹಲವಾರು ವಿಷಯಗಳನ್ನು ಮೆಲುಕು ಹಾಕಿದ್ದಾರೆ.

“ನನಗೆ ತಿಳಿದಂತೆ ರಜನಿ ರಾಜಕೀಯಕ್ಕೆ ಬರುವುದು ಅನುಮಾನ. ಅವರಿಗೆ ಅಂತಹ ಆಲೋಚನೆಗಳಿಲ್ಲ. ರಾಜಕೀಯ ಪ್ರವೇಶಿಸುವಂತೆ ಅವರ ಮೇಲೆ ಒತ್ತಡ ಇರುವುದು ನಿಜ. ಆದರೂ ಅವರು ರಾಜಕೀಯಕ್ಕೆ ಬರುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಯಾಕಂದ್ರೆ ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಣಯ ತೆಗೆದುಕೊಳ್ಳುವುದಿದ್ದರೂ ರಜನಿ ಮೊದಲು ನನ್ನ ಬಳಿ ಹೇಳುತ್ತಾರೆ” ಎಂದು ಸಿನ್ಹಾ ಹೇಳಿದ್ದಾರೆ.

ತಮ್ಮ ಮತ್ತು ರಜನಿ ಅವರ ಹಳೆಯ ಬಾಂಧವ್ಯವನ್ನು ನೆನಪು ಮಾಡಿಕೊಂಡಿರುವ ಅವರು, “ನಾನು ಯಾವಾಗಲಾದ್ರೂ ಚೆನ್ನೈಗೆ ಹೋದ್ರೆ ತಪ್ಪದೇ ಅವರ ಮನೆಗೆ ಹೋಗ್ತೇನೆ. ಅವರು ಮುಂಬೈಗೆ ಬಂದ್ರೆ ನಮ್ಮ ಮನೆಗೆ ಬಂದು ಹೋಗ್ತಾರೆ. ರಾಜಕೀಯಕ್ಕೆ ಉದ್ದೇಶವಿದ್ದರೆ ಅವರು ಮೊದಲು ನನ್ನ ಬಳಿ ಹೇಳಿಕೊಳ್ತಾರೆ. ಈ ಹಿಂದೆ ರಜನಿ ಅವರು ವಾಜಪೇಯಿ, ಯಶ್ವಂತ್ ಸಿನ್ಹಾ ಅವರನ್ನು ಭೇಟಿಯಾಗಲು ಬಯಸಿದಾಗ ನಾನೇ ಕರೆದೊಯ್ದು ಭೇಟಿ ಮಾಡಿಸಿದ್ದೆ. ಒಮ್ಮೆ ಬಾಳಾ ಠಾಕ್ರೆಯನ್ನು ಭೇಟಿಯಾಗ ಬಯಸಿದಾಗಲೂ ನಾನೇ ರಜನಿಯನ್ನು ಠಾಕ್ರೆ ಬಳಿಗೆ ಕರೆದೊಯ್ದಿದ್ದೆ. ಹೀಗೆ ರಜನಿ ರಾಜಕೀಯದ ನಂಟಿಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿ ನಾನಿದ್ದೇನೆ. ನನ್ನ ಗಮನಕ್ಕೆ ತರದೇ, ನನ್ನನ್ನು ಸಂರ್ಪಕಿಸದೇ ರಜನಿ ರಾಜಕೀಯ ಪ್ರವೇಶಿಸುವುದಿಲ್ಲ” ಎಂದು ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಹಿಂದೆ ಕೂಡಾ ಹಲವಾರು ಪಕ್ಷಗಳು ರಜನಿಯನ್ನು ರಾಜಕೀಯಕ್ಕೆ ಕರೆ ತರಲು ಯತ್ನಿಸಿದ್ದವು. ರಜನಿ ಕೂಡ ಸೀರಿಯಸ್‌ ಆಗಿ ರಾಜಕೀಯ ಪ್ರವೇಶಿಸಲು ಒಲವು ತೋರಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಹಿಂದೆ ಸರಿದಿದ್ದರು” ಎಂದು ಅವರ ನೆನಪಿಸಿದರು.

ರಜನಿಕಾಂತ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುತ್ತಾರೆ ಎಂಬ ಕುರಿತು ಪ್ರತಿಕ್ರಿಯಿಸಿರುವ ಅವರು, “ಭೇಟಿಗೆ ಅಂತಹ ಮಹತ್ವ ಕೊಡಬೇಕಿಲ್ಲ. ಸಲ್ಮಾನ್‌ಖಾನ್, ಅಕ್ಷಯ್‌ ಕುಮಾರ್ ಕೂಡಾ ಪ್ರಧಾನಿಯನ್ನು ಭೇಟಿ ಆಗಿದ್ದಾರೆ. ಆದರೆ ಅವರೆಲ್ಲ ರಾಜಕೀಯ ಪ್ರವೇಶಿಸುತ್ತಾರೆಂದು ನಾವು ಹೇಳಲು ಸಾಧ್ಯವೇ? ಅವರೆಲ್ಲ ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿ ಆಗಿದ್ದಾರೆ” ಎಂದು ಸಿನ್ಹಾ ಹೇಳಿದ್ದಾರೆ.

-ಎನ್.ಬಿ.ಎನ್.

Leave a Reply

comments

Related Articles

error: