
ದೇಶಪ್ರಮುಖ ಸುದ್ದಿ
ಉಗ್ರವಾದಕ್ಕೆ ಎದುರೇಟು ; ಭಾರತೀಯ ಸೇನೆಯಿಂದ ಪಾಕಿಸ್ತಾನ ಸೇನಾ ನೆಲೆಗಳ ನಾಶ
ದೇಶ (ಪ್ರಮುಖ ಸುದ್ದಿ) ನವದೆಹಲಿ, ಮೇ 23 : ಪಾಕಿಸ್ತಾನವು ಉಗ್ರವಾದಿ ಕೃತ್ಯಗಳಿಗೆ ನಿರಂತರ ಸಹಾಯ ಮಾಡುತ್ತಿರುವ ಕಾರಣದಿಂದ ಪ್ರತೀಕಾರವಾಗಿ ದಾಳಿ ನಡೆಸಿದ ಭಾರತೀಯ ಸೇನೆಯು ಪಾಕಿಸ್ತಾನದ ನೌಶೇರಾ ಸೆಕ್ಟರ್ನ ಗಡಿ ನಿಯಂತ್ರಣ ರೇಖೆಯಲ್ಲಿನ ಸೇನಾ ನೆಲೆಗಳಿಗೆ ಹಾನಿ ಉಂಟುಮಾಡಿದೆ. ಈ ಸ್ಥಳದಿಂದ ಪಾಕಿಸ್ತಾನ ಉಗ್ರರನ್ನು ಭಾರತದ ಗಡಿಯೊಳಕ್ಕೆ ನುಸುಳಿಸುತ್ತಿತ್ತು.
ಈ ದಾಳಿಯ ಕುರಿತು ಮಾಹಿತಿ ನೀಡಿರುವ ಮೇಜರ್ ಜನರಲ್ ಅಶೋಕ್ ನರುಲಾ ಅವರು, “ಭಾರತೀಯ ಸೇನೆಯ ದಾಳಿಯಿಂದಾಗಿ ಪಾಕಿಸ್ತಾನದ ನೆಲೆಗಳಲ್ಲಿ ಭಾರಿ ಹಾನಿ ಉಂಟಾಗಿದೆ. ನಮ್ಮ ಸೇನೆ ನಡೆಸಿದ ಫಿರಂಗಿ ದಾಳಿಗೆ ಪಾಕಿಸ್ತಾನಿ ಸೇನೆಯ ಬಂಕರ್ಗಳೂ ಕೂಡ ಹಾನಿಗೀಡಾಗಿವೆ. ಪಾಕಿಸ್ತಾನ ಸೇನೆಯು ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರು ನುಸುಳಲು ಸಹಕರಿಸುತ್ತಲೇ ಇದೆ. ಮುಂದಿನ ದಿನಗಳಲ್ಲಿ ಎತ್ತರದ ಸ್ಥಾನಗಳಲ್ಲಿ ಹಿಮ ಕರಗುವುದರಿಂದ ಇದು ಹೆಚ್ಚಳಗೊಳ್ಳಲಿದೆ ಎನ್ನಲಾಗಿದೆ.
ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರ ನುಸುಳುವಿಕೆ ತಡೆಗಟ್ಟುವ ಸಲುವಾಗಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ನಿರ್ದಿಷ್ಟ ದಾಳಿ ನಡೆಸಿ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದ ಒಂಭತ್ತು ತಿಂಗಳ ನಂತರ ಭಾರತೀಯ ಸೇನೆಯು ಪಾಕಿಸ್ತಾನ ಮೇಲೆ ಗಡಿಯಲ್ಲಿ ಭಾರೀ ದಾಳಿ ಮಾಡಿರುವುದು ಗಮನಾರ್ಹ.
-ಎನ್.ಬಿ.ಎನ್.