ಕರ್ನಾಟಕಮೈಸೂರು

ವೈವಿಧ್ಯಮಯ ತಿನಿಸುಗಳ ಆಗರ ಆಹಾರಮೇಳ

ಒಂದೆಡೆ ದಾವಣೆಗೆರೆ ಬೆಣ್ಣೆದೋಸೆ, ಬಿಸಿ ಬಿಸಿ ಗೋಬಿ ಮಂಚೂರಿ ಇನ್ನೊಂದೆಡೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ ಶೇಂಗಾ ಚಟ್ನಿ ಎಲ್ಲರ ಬಾಯಲ್ಲೂ ನೀರೂರಿಸುತ್ತಿತ್ತು. ಇದು ವಿಶ್ವವಿಖ್ಯಾತ ದಸರಾ ಹಬ್ಬದ ವಿಶೇಷ ಆಹಾರ ಮೇಳದ ಒಂದು ನೋಟ. ಪ್ರವಾಸಿಗರು ಮತ್ತು ಮೈಸೂರಿಗರಿಗೆ ಒಂದು ಸುಂದರ ಅನುಭವ ನೀಡಿದ್ದು ಈ ಆಹಾರ ಮೇಳ. ಹೌದು ದಸರಾ ಪ್ರಯುಕ್ತ ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಜನರ ಬಾಯಲ್ಲಿ ನೀರೂರಿಸುವಂತಹ ರುಚಿ ರುಚಿ ತಿಂಡಿ ತಿನಿಸುಗಳ ಕ್ರಮಬದ್ಧ ಸಾಲೇ ಇತ್ತು.

ಜನರಂತೂ ಬಹಳ ಉತ್ಸಾಹದಿಂದ ತರಾತುರಿಯಲ್ಲಿ ಆಹಾರ ಮೇಳದೆಡೆಗೆ ನುಗ್ಗುತ್ತಿದ್ದರು.  ಚಿಕ್ಕಮಕ್ಕಳಿಂದ ಹಿಡಿದು, ಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ವಯಸ್ಕರವರೆಗೆ ಈ ಆಹಾರ ಮೇಳ ತುಂಬಿತ್ತು. ಒಂದು ಸಾಲಿನಲ್ಲಿ ಮಾಂಸಾಹಾರದ ಮಳಿಗೆಗಳು, ಇನ್ನೊಂದು ಸಾಲಿನಲ್ಲಿ ಸಸ್ಯಾಹಾರದ ಮಳಿಗೆಗಳು. ಮಾಂಸಾಹಾರದ ಸಾಲಿನಲ್ಲಿ ಗೀರೈಸ್, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಚಿಕನ್ ಪಲಾವ್, ಮೀನು ಉಪಾಹಾರ ಗೃಹ, ಬನ್ನೂರ್ ಗೌಡ ಪಲಾವ್, ತೇಗು ಮೆಸ್, ಸುಗ್ಗಿಮನೆ.. ಹೀಗೆ ಒಂದೆ ಎರಡೇ ಸ್ಟಾಲ್ ಗಳ ಸಾಲೇ ಇತ್ತು. ಆದರೆ ಮಾಂಸಪ್ರಿಯರಿಗೆ ಇಂದು ನಿರಾಶೆ. ಏಕೆಂದರೆ ಭಾನುವಾರ ಗಾಂಧಿಜಯಂತಿ ಪ್ರಯುಕ್ತ ಮಾಂಸಾಹಾರಕ್ಕೆ ನಿಷೇಧ ಹಾಕಲಾಗಿತ್ತು. ಇದನ್ನರಿಯದ ಜನರು ಬಂದು “ಒಂದು ಪ್ಲೇಟ್ ಚಿಕನ್ ಬಿರಿಯಾನಿ ಕೊಡಿ” ಎಂದು ಕೇಳುತ್ತಿದ್ದುದ್ದು ಒಂದು ವಿಪರ್ಯಾಸವೇ ಸರಿ ಎನಿಸಿತು.

ಆಹಾರ ಮೇಳದಲ್ಲಿ ಬುಡಕಟ್ಟು ಹಾಡಿ ಮನೆಯ ‘ಬಂಬೂ ಬಿರಿಯಾನಿ’ ಎಲ್ಲರ ಗಮನ ಸೆಳೆಯುತ್ತಿದ್ದುದ್ದು ಒಂದು ವಿಶೇಷ.  ಬುಡಕಟ್ಟು ಜನರ ಆಹಾರ ಪದ್ಧತಿ ಹೇಗಿರುತ್ತದೆ ಎಂಬ ಕುತೂಹಲದಿಂದ ಅಲ್ಲಿನ ಬಂಬೂ ಬಿರಿಯಾನಿಯನ್ನು ಸವಿಯಲು ಸಾಲುಸಾಲಾಗಿ ಬರುತ್ತಿದ್ದುದ್ದು ತುಂಬಾ ವಿಶೇಷವಾಗಿ ಕಂಡುಬಂದಿತು.

ಅಲ್ಲಿನ ಮಳಿಗೆಗಳ ಮಾಲೀಕರಿಗೆ ಈ ಬಾರಿ ಖುಷಿಯೋ ಖುಷಿ. ಏಕೆಂದರೆ ಈ ಬಾರಿಯ ಆಹಾರ ಮೇಳ ತುಂಬಾ ಅಚ್ಚುಕಟ್ಟಾಗಿದ್ದು, ಅನೇಕ ಸೌಲಭ್ಯಗಳನ್ನು ನೀಡಿರುವುದು ಅವರ ಸಂತಸಕ್ಕೆ ಕಾರಣವಾಗಿದೆ. “ಕಳೆದ ಬಾರಿ ಸರಳ ದಸರಾ ಇದ್ದುದರಿಂದ ಆಹಾರ ಮೇಳ ಮಾಡಿರಲಿಲ್ಲ. ಈ ಬಾರಿ ಮೈದಾನಕ್ಕೆ ನೆಲಹಾಸನ್ನು ಹಾಸಿ, ಅಂಗಡಿಗಳಿಗೆ ಕಟ್ಟಳಿಗೆಯ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ಮಳೆ ಬಂದರೂ ತೊಂದರೆ  ಆಗುವುದಿಲ್ಲ. ಇದು ಇಲ್ಲಿ ಬರುವ ಜನರಿಗೂ ಸಹ ತುಂಬಾ ಖುಷಿ ಕೊಟ್ಟಿದೆ” ಎಂದು ದಮ್ ಬಿರಿಯಾನಿ ಅಂಗಡಿಯ ಮಾಲೀಕ ಹರೀಶ್ ಕುಮಾರ್ ತಮ್ಮ ಸಂತಸವನ್ನು ಹಂಚಿಕೊಂಡರು.

“ಪಾರ್ಕಿಂಗ್ ವ್ಯವಸ್ಥೆ  ಈ ಬಾರಿ ವ್ಯವಸ್ಥಿತವಾಗಿದೆ. ಈ ಬಾರಿಯ ಆಹಾರ ಮೇಳದಂತೆ ಯಾವ ವರ್ಷವೂ ಇರಲಿಲ್ಲ. ಶುಚಿ ,ರುಚಿ ಆಹಾರ ಸವಿಯಲು  ನಮಗಂತೂ ತುಂಬಾ ಖುಷಿಯಾಗುತ್ತಿದೆ” ಎಂಬುದು ಅಲ್ಲಿಗೆ ಬಂದಿದ್ದ ಜನರ ಅಭಿಪ್ರಾಯ. ಆದರೆ ಕೈ ತೊಳೆಯಲು ಸರಿಯಾದ ವ್ಯವಸ್ಥೆ ಇಲ್ಲದೇ ಜನರು ಪರದಾಡುತ್ತಿದ್ದುದು ಆಹಾರ ಮೇಳಕ್ಕೆ ಒಂದು ಕಪ್ಪುಚುಕ್ಕೆಯಾಗಿ ಕಂಡುಬಂದಿತು.

ಈ ಬಾರಿಯ ಆಹಾರ ಮೇಳದಲ್ಲಿ ಸಾವಯವ, ಹಸಿರು ಆಹಾರ ಮತ್ತು ಸಿರಿಧಾನ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು ಒಂದು ನೂತನ ಪ್ರಯೋಗವಾಗಿತ್ತು. ಜನರಂತೂ ‘ಶುದ್ಧ ಆಹಾರ ಪ್ರತಿಯೊಬ್ಬರ ಹಕ್ಕು’ ಎಂಬಂತೆ ಇಲ್ಲಿ ತಿನಿಸುಗಳನ್ನು ಸವಿಯುತ್ತಿದ್ದರು. ಅಲ್ಲಿಂದ ಮುಂದೆ ಸಾಗಿದಂತೆ ಕಣ್ಣಿಗೆ ಬಿದ್ದಿದ್ದು ಬಿಜಾಪುರದ ಸ್ಟಾಲ್. ಬಿಜಾಪುರ ಅಂದ್ರೆ ಕೇಳಬೇಕೆ. ಏನಪ್ಪಾ ಅಂತ ವಿಶೇಷ ಅಲ್ಲಿ ಅಂತ ಕೇಳ್ತಿರಾ.. ಫೇಮಸ್ ಖಡಕ್ ರೊಟ್ಟಿಯ ಜೊತೆ ಶೇಂಗಾ ಚಟ್ನಿ ಸವಿಯಲು ಜನರ ಮಾರುದ್ದ ಸಾಲು ಕಂಡಿದ್ದು..  ಅವರ ಮಾತಲ್ಲೇ ಹೇಳುವುದಾದರೆ, “ ನಮ್ ಬಿಜಾಪುರದ್ ರೊಟ್ಟಿ ಕೊಳ್ಳಾಕ ಮಂದಿ ಸಾಲನ್ಯಾಗ ಬಂದು ನಿಲ್ತಾರ.. ರೊಟ್ಟಿ ತಿಂದು ಸೇಂಗಾ ಚಟ್ನಿ ರುಚಿ ನೋಡಿ ನಮ್ ವಿಳಾಸ ಈಸ್ಕೊಂಡ್ ಹೋಗ್ತಾರ.. ಈಗಾಗ್ಲೇ ನಾವ್ ತಂದಿದ್ ರೊಟ್ಟಿ ಪೂರಾ ಖಾಲಿ ಆಗೈತಿ. ಅಷ್ಟೊಂದು ಡಿಮ್ಯಾಂಡ್ ಇದೆ ನೋಡ್ರಾ ನಮ್ ರೊಟ್ಟಿಗೆ. ಇದುನ್ ನೋಡಿ ನಮ್ಗ ಬಾಳ್ ಖುಷಿ ಆಗ್ತಾದ” ಅಂತ ತಮ್ಮ ಹರ್ಷ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಸಬ್ಬಕ್ಕಿ ವಡೆ, ಮಿರ್ಚಿ ಗಿರಮಿಟ್, ಬದನೆಕಾಯಿ ಎಣ್ಣೆಗಾಯಿ ಪಲ್ಯ,ಕೆಂಪು ಚಟ್ನಿಯಂತೂ ಬಾಯಲ್ಲಿ ನೀರೂರಿಸುತ್ತಿದ್ದವು.

ತಂಪು ಪಾನೀಯ, ಬೇಕರಿ ಪದಾರ್ಥಗಳು, ಫಾಸ್ಟ್ ಫುಡ್ ಗಳು ಹೆಚ್ಚಾಗಿ ಪಟ್ಟಣದ ಜನರನನ್ನು ಆಕರ್ಷಿಸುತ್ತಿದ್ದವು. ಚುರುಮುರಿ, ಬೇಲ್ ಪುರಿ, ಪಾಪ್ ಕಾರ್ನ್, ಸ್ವೀಟ್ ಕಾರ್ನ್, ಗೋಬಿ ಮಂಚೂರಿ ಇನ್ನೂ ಮೊದಲಾದ ರುಚಿ ರುಚಿಯ ಸ್ನ್ನಾಕ್ಸ್ ಗಳನ್ನು ಸವಿಯುತ್ತಿದ್ದವರೇ ಹೆಚ್ಚು.

ಒಟ್ಟಾರೆ ಸಂಪೂರ್ಣ ಗ್ರಾಮೀಣ ಸೊಗಡಿನ ಆಹಾರದ ಸವಿರುಚಿ ಸಿಗಬೇಕಾದರೆ ಅದು ಆಹಾರ ಮೇಳದಲ್ಲಿ ಮಾತ್ರ. ಅದರಲ್ಲೂ ಉತ್ತರ ಕರ್ನಾಟಕದ ವಿಶೇಷ ತಿಂಡಿಗಳಲ್ಲಿ. ಏಕೆಂದರೆ ಈ ತಿನಿಸುಗಳು ಪೂರ್ತಿಯಾಗಿ ಮನೆಯಲ್ಲೇ ಮಾಡಿದ್ದು, ಯಾವುದೇ ಯಂತ್ರಗಳನ್ನು ಬಳಸದೇ ಕೈಯಲ್ಲೇ ತಯಾರಿಸಿದ್ದು ಅವುಗಳ ರುಚಿಯನ್ನು ಇಮ್ಮಡಿಗೊಳಿಸಿತ್ತು.

ಲತಾ ಸಿ.ಜಿ.

Leave a Reply

comments

Related Articles

error: