ಮೈಸೂರು

ಮಹಾನಗರಪಾಲಿಕೆ ಆಶ್ರಯ ಮನೆಗಳಿಗೆ ಮೂಲಭೂತ ಸೌಕರ್ಯ ನೀಡುತ್ತಿಲ್ಲ : ಹೆಚ್.ಆರ್.ಸುಂದರೇಶ್ ಆರೋಪ

ಮೈಸೂರು, ಮೇ 24: ಕೇಂದ್ರ ಸರ್ಕಾರ 2002-2003 ರಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯನ್ನು ರೂಪಿಸಿ ಮೈಸೂರು ಮಹಾನಗರ ಪಾಲಿಕೆಯ ಉಸ್ತುವಾರಿಯಲ್ಲಿ ನಿರ್ಮಿಸಿಕೊಟ್ಟಿದ್ದ ಆಶ್ರಯ ಮನೆಗಳಲ್ಲಿ ನಾಗರೀಕ ಸೌಲಭ್ಯಗಳನ್ನು ನೀಡದೆ ಪಾಲಿಕೆಯು ತೊಂದರೆ ನೀಡುತ್ತಿದೆ ಎಂದು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಹೆಚ್.ಆರ್.ಸುಂದರೇಶ್ ಆರೋಪಿಸಿದರು.

ಕೇಂದ್ರ ಸರ್ಕಾರ 2002-2003 ರಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯನ್ನು ರೂಪಿಸಿ ಸ್ವಂತ ಸೂರು ಇಲ್ಲದವರಿಗೆ ಮೈಸೂರು ಮಹಾನಗರ ಪಾಲಿಕೆಯ ಉಸ್ತುವಾರಿಯಲ್ಲಿ ಮನೆ ನಿರ್ಮಿಸಿಕೊಡಲು ನಿರ್ದೇಶನ ನೀಡಿತ್ತು. ಇದರಂತೆ ಮೈಸೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿ ಕರೆಯಲಾಗಿತ್ತು. ಅದರಂತೆ ಅರ್ಜಿದಾರರಿಂದ 10 ಸಾವಿರ ರೂ.ನಂತೆ 20*30 ಅಳತೆಯ ನಿವೇಶನ ನಿರ್ಮಿಸಲು ಮುಂಗಡ ಹಣ ಪಡೆಯಲಾಗಿತ್ತು. ಇದರಂತೆ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಜನಪ್ರತಿನಿಧಿಗಳ ಸಲಹೆ ಮೇರೆಗೆ ತಯಾರಿಸಿ ಸಾವಿರಾರು ಮನೆಗಳನ್ನು ನಿರ್ಮಿಸಿಕೊಡಲಾಯಿತು. ಆದರೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಒಳಚರಂಡಿ, ವಿದ್ಯುಚ್ಛಕ್ತಿ ಒದಗಿಸದೆ ಫಲಾನುಭವಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದರು.

ಮತ್ತೊಂದೆಡೆ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳ ಹೆಚ್ಚುವರಿ ಪಟ್ಟಿಯ ಗ್ರಾಹಕರು ಅರ್ಜಿ ಜತೆ 10 ಸಾವಿರ ಹಣ ಪಾವತಿಸಿದ್ದರೂ, ಅವರಿಗೆ ನಿರ್ದಿಷ್ಟ ಕಾಲಾವಧಿಯಲ್ಲಿ ಮನೆ ಮಂಜೂರು ಮಾಡುವ ಆಶ್ವಾಸನೆಯನ್ನು ನೀಡದೆ 10-15 ವರ್ಷದಿಂದ ಕಾಲಹರಣ ಅಧಿಕಾರಿಗಳು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನೊಂದ ಗ್ರಾಹಕರಿಗೆ ಅರಿವು ಮೂಡಿಸುವ ಸಲುವಾಗಿ ಮೈಸೂರಿನ ಜಯನಗರದ ಖಾಯಂ ಅದಾಲತ್ ಕೋರ್ಟ್ ನಲ್ಲಿ ದೂರು ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ. ಇಲ್ಲಿ ದೂರು ಸಲ್ಲಿಸಲು ಯಾವುದೇ ರೀತಿಯ ಶುಲ್ಕ ಅಥವಾ ನ್ಯಾಯವಾದಿಗಳ ನೆರವು ಅವಶ್ಯಕತೆ ಇರುವುದಿಲ್ಲ. ಅದರ ತೀರ್ಪನ್ನು ಯಾವುದೇ ನ್ಯಾಯಾಲಯದಲ್ಲಿ ಉಭಯ ಕಕ್ಷಿದಾರರು ಪ್ರಶ್ನಿಸುವಂತಿಲ್ಲ. 2-3 ತಿಂಗಳೊಳಗೆ ಪರಿಹಾರ ದೊರಕಿಸಿಕೊಡಲು ಆದೇಶ ನೀಡಬಹುದಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ದೂ.ಸಂ. 9164249300/ 9243999713 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಎಲ್.ನಾಗರಾಜ್ ಅರಸ್, ಎಂ.ಎನ್.ಸೂರ್ಯನಾರಾಯಣ, ಫಲಾನುಭವಿಗಳಾದ ಬಿ.ಗೀತಾ ಮತ್ತು ರಾಜು ಹಾಜರಿದ್ದರು.  (ವರದಿ:ಎಲ್.ಜಿ)

Leave a Reply

comments

Related Articles

error: