ಮೈಸೂರು

ಮುಖ್ಯಮಂತ್ರಿಗಳ ಕಾರ್ಯಕ್ರಮ ಪ್ರಯುಕ್ತ ವೇದಿಕೆ ತಯಾರಿಸಲು ರೈತರ ಬೆಳೆ ನಾಶ : ಪರಿಹಾರ ಒದಗಿಸಿಕೊಡಲು ಮನವಿ

ಮೈಸೂರು(ಬೈಲಕುಪ್ಪೆ)ಮೇ.25:-  ಮಳೆ ಹೀಗೇ ಮುಂದುವರೆದರೆ ಸಿ.ಎಂ. ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ ಮಾಡಲು ತೊಂದರೆಯಾಗಲಿದೆ  ಎಂದು ನಂ.4, ಹಾರಂಗಿ ಪುನರ್ವಸತಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಕೆ.ರಾಜೇಗೌಡ ತಿಳಿಸಿದ್ದಾರೆ.

ತಾಲೂಕಿನ ಮುತ್ತಿನಮೊಳಸೋಗೆ ಗ್ರಾಮದ ಸಮೀಪ ಇರುವ ಕಾವೇರಿ ನದಿ ದಂಡೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೇ.31 ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಿದ್ದತೆ ಭರದಿಂದ ಸಾಗುತ್ತಿದೆ. ಆದರೆ ನದಿಯ ಸಮೀಪವಿರುವ ಜಮೀನಿನಲ್ಲಿ ಕಾರ್ಯಕ್ರಮಕ್ಕೆ ಸಿದ್ದತೆ ಮಾಡುತ್ತಿರುವುದರಿಂದ ಮತ್ತು ಹೇರಳವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣಕ್ಕೆ ವಾಹನ ಮತ್ತು ಯಂತ್ರೋಪಕರಣಗಳು ಬಳಸಿಕೊಳ್ಳಲು ಆಗದೇ ಇರುವುದರಿಂದ ಸಿದ್ದತೆಗೆ ಅಡ್ಡಿಯಾಗುತ್ತಿದೆ ಎಂದು ತಿಳಿಸಿದರು. ಕಳೆದ 3-4 ದಿನಗಳಿಂದ ಮಳೆಯು ನಿರಂತರವಾಗಿ ಬೀಳುತ್ತಿರುವುದರಿಂದ ನದಿಗೆ ತೆರಳುವ ರಸ್ತೆ ಕಿರಿದಾಗಿದ್ದು ಇದರ ಕಾಮಗಾರಿಯನ್ನು ಪೂರ್ಣಗೊಳಿಸಲು ಕಷ್ಟವಾಗುತ್ತಿದೆ. ಕಾರ್ಯಕ್ರಮದ ದಿನಗಳು ಸಮೀಪಿಸುತ್ತಿದೆ, ಇದರಿಂದ ಸಕಾಲಕ್ಕೆ ವೇದಿಕೆಯನ್ನು ನಿರ್ಮಿಸುವುದು ಕಷ್ಟವಾಗುತ್ತಿದೆ ಎಂದು ವಿವರಿಸಿದರು.

ರೈತರ ಬೆಳೆನಾಶ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೇ.31 ರಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುತ್ತಿನಮೊಳಸೋಗೆ ಸಮೀಪ ಇರುವ ಕಾವೇರಿ ನದಿಯ ದಂಡೆಯಲ್ಲಿರುವ ರೈತರಾದ ಸ್ವಾಮಿನಾಯಕ, ನಾರಾಯಣ, ಮಲ್ಲೇಶನಾಯಕ, ಲಕ್ಷ್ಮಿ ಎಂಬುವರ ಜಮೀನಿನಲ್ಲಿ ಕಾರ್ಯಕ್ರಮದ ವೇದಿಕೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಆದರೆ ಈ ರೈತರು ತಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ಎಳ್ಳು, ಹಲಸಂಧೆ, ತೊಗರಿ, ಸೇರಿದಂತೆ ಇನ್ನಿತರ ದ್ವಿದಳ ಧಾನ್ಯಗಳ ಬೆಳೆಯನ್ನು ಬೆಳೆಯಲಾಗಿದ್ದು ಇದೇ ಜಮೀನಿನಲ್ಲಿ ಕಾರ್ಯಕ್ರಮಕ್ಕೆ ವೇದಿಕೆಯನ್ನು ಸಿದ್ದಪಡಿಸಲು ಈ ಭೂಮಿಯಲ್ಲಿದ್ದ ಬೆಳೆಯನ್ನು ಜೆಸಿಬಿ ಸೇರಿದಂತೆ ಇನ್ನಿತರ ಯಂತ್ರಗಳಿಂದ ನಾಶಪಡಿಸಿ ಸಮತಟ್ಟು ಮಾಡಲಾಗಿದೆ.

ಇದರಿಂದ ರೈತರು ನಂ.4, ಹಾರಂಗಿ ಪುನರ್ವಸತಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಕೆ.ರಾಜೇಗೌಡ ರವರನ್ನು ಸಂಪರ್ಕಿಸಿ ಸೂಕ್ತ ಬೆಳೆ ಪರಿಹಾರ ಮತ್ತು ಭೂಮಿ ಪರಿಹಾರವನ್ನು ಕೊಡಿಸಿಕೊಡುವಂತೆ ಮನವಿ ಮಾಡಿಕೊಂಡಾಗ ಮುಂದಿನ 2 ದಿನಗಳಲ್ಲಿ ಸೂಕ್ತ ಪರಿಹಾರ ಕೊಡುವುದಾಗಿ ತಿಳಿಸಿ ಕಾಮಗಾರಿಯನ್ನು ಕೈಗೆತ್ತಿಕೊಂಡು 7 ದಿನ ಕಳೆದರೂ ಇಲ್ಲಿಯವರೆಗೆ ಬಿಡಿಗಾಸೂ ಸಹ ಕೈ ಸೇರಿಲ್ಲ ಎಂದು ರೈತರು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.

ಕಾರ್ಯಕ್ರಮದ ದಿನಗಳು ಸಮೀಪಿಸುತ್ತಿದ್ದು ನಮಗೆ ಸೂಕ್ತ ಪರಿಹಾರ ಕೊಡುವ ನಂಬಿಕೆಯು ಇಲ್ಲವಾಗಿದ್ದು ಕೂಡಲೇ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಧ್ಯೆ ಪ್ರವೇಶಿಸಿ ನಮಗೆ ಸೂಕ್ತ ಪರಿಹಾರ ಕೊಡಿಸಿಕೊಡಬೇಕೆಂದು ರೈತರು ಮನವಿ ಮಾಡಿಕೊಂಡಿದ್ದಾರೆ.

ಸ್ಪಷ್ಟನೆ : ನಿಯಮದಡಿ ವಿವಿಧ ಇಲಾಖೆಯಿಂದ ಆಯವ್ಯಯ ದಾಖಲಾತಿಗಳನ್ನು ಪಡೆದು ರೈತರಿಗೆ ಪರಿಹಾರ ಕೊಡಬೇಕಾಗಿದ್ದು ದಿನಗಳು ವಿಳಂಬವಾಗುತ್ತಿವೆ, ಕೃಷಿ ಇಲಾಖೆಯ ಅಧಿಕಾರಿಗಳಿಂದ ಆಗಿರುವ ಬೆಳೆನಷ್ಟದ ಬಗ್ಗೆ ಮಾಹಿತಿ ಪಡೆದು ಮತ್ತು ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಬೇಕಾಗುವ ಭೂವಿಸ್ತೀರ್ಣದ ಅನುಗುಣವಾಗಿ ದರವನ್ನು ಆಧರಿಸಿ ಅವರಿಗೆ ಸರ್ಕಾರದಿಂದ ಪರಿಹಾರ ಕೊಡಿಸಿಕೊಡುವುದಾಗಿ ರಾಜೇಗೌಡ ಸ್ಪಷ್ಟಪಡಿಸಿದ್ದಾರೆ. (ಆರ್.ಬಿ.ಆರ್,ಎಸ್.ಎಚ್)

Leave a Reply

comments

Related Articles

error: