ಮೈಸೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರಕಾರ್ಮಿಕರಿಂದ ಪೊರಕೆ ಚಳುವಳಿ

ಮೈಸೂರು,ಮೇ.25:- ತಮ್ಮ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗುತ್ತಿಗೆ ಪೌರಕಾರ್ಮಿಕರು ವಚನ ಭ್ರಷ್ಟ ಸರ್ಕಾರದ ವಿರುದ್ಧ ‘ಪೊರಕೆ ಚಳುವಳಿ’ ನಡೆಸಿದ್ದು, ಮೈಸೂರಿನಲ್ಲಿಯೂ ಪೌರಕಾರ್ಮಿಕರು ಪೊರಕೆ ಚಳುವಳಿ ನಡೆಸಿದರು.

ಚಳುವಳಿಯಲ್ಲಿ ಪಾಲ್ಗೊಂಡ  ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರ ಕಳೆದ ವರ್ಷ ಅಂದರೆ 04/05/2016 ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ 2017 ರ ಮಾರ್ಚ್ ತಿಂಗಳೊಳಗೆ ವಿಶೇಷ ನೇಮಕಾತಿ ನಿಯಮ ರೂಪಿಸಿ ಎಲ್ಲಾ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸಲು ನಿರ್ಧರಿಸಿದೆ. ಆದರೆ ಇದುವರೆಗೂ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದೇ ಕಾಲ ಹರಣ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುತ್ತಿಗೆ ಪೌರಕಾರ್ಮಿಕರ ಖಾಯಂಗೊಳಿಸುವ ಸಂಬಂಧ ಸುಮಾರು ನೂರಕ್ಕೂ ಹೆಚ್ಚು ಬಾರಿ ಮಾಧ್ಯಮಗಳ ಮುಂದೆ ಗುತ್ತಿಗೆ ವ್ಯವಸ್ಥೆಯನ್ನು ರದ್ದು ಮಾಡಲಾಗುವುದು ಎಂಬ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಕಳೆದ 4 ವರ್ಷಗಳಿಂದ ಅಧಿಕೃತವಾದ ಯಾವ ಕ್ರಮವನ್ನೂ ತೆಗೆದುಕೊಳ್ಳದೆ ಜಾಣ ಕುರುಡರಂತೆ ಅಧಿಕಾರಿಗಳ ಮಾತಿಗೆ ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇಂದು ರಾಜ್ಯಾದ್ಯಂತ ಪೊರಕೆ ಚಳುವಳಿ ನಡೆಯುತ್ತಿದೆ. 15 ದಿನಗಳೊಳಗೆ ರಾಜ್ಯ ಸರ್ಕಾರ ತನ್ನ ಸಚಿವ ಸಂಪುಟದ ತೀರ್ಮಾನದಂತೆ ಗುತ್ತಿಗೆ ಪದ್ಧತಿ ರಫ್ತು ಮಾಡುವ ಪ್ರಕ್ರಿಯೆಗೆ ಮುಂದಾಗಿಲ್ಲದಿದ್ದಲ್ಲಿ ಜೂನ್ 12 ರಿಂದ ರಾಜ್ಯಾದ್ಯಂತ ಸ್ವಚ್ಛತಾ ಕಾರ್ಯ ಸ್ಥಗಿತ ಮಾಡಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಟೌನ್ ಹಾಲ್ ನಿಂದ ಹೊರಟ ಮೆರವಣಿಗೆ ಜಾಥಾವು ಸಯ್ಯಾಜಿರಾವ್ ರಸ್ತೆ, ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗಳನ್ನು ತಲುಪಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿತು. ಈ ಸಂದರ್ಭ ಸಾವಿರಾರು ಪೌರ ಕಾರ್ಮಿಕರು ಪಾಲ್ಗೊಂಡಿದ್ದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: