ನಮ್ಮೂರುಪ್ರಮುಖ ಸುದ್ದಿಮೈಸೂರು

ಆಹಾರ ಮೇಳ : ಉತ್ಸಾಹದಿಂದ ರಾಗಿ ರೊಟ್ಟಿ ಹುಚ್ಚೆಳ್ ಚಟ್ನಿ ತಯಾರಿಸಿದ ನಳ-ದಮಯಂತಿ

ಮೈಸೂರು ದಸರಾ ಮಹೋತ್ಸವದಂಗವಾಗಿ ಆಹಾರ ಮೇಳ ಉಪಸಮಿತಿ ಆಯೋಜಿಸಿದ್ದ ‘ನಳದಮಯಂತಿ’ ಸ್ಪರ್ಧೆಯಲ್ಲಿ ದಂಪತಿಗಳು ಜೊತೆಯಾಗಿ ರಾಗಿ ರೊಟ್ಟಿ –ಹುಚ್ಚೆಳ್ ಚಟ್ನಿ ತಯಾರಿಸಿ ಸರಸವೇ ಜನನ, ವಿರಸವೇ ಮರಣ ಸಮರಸವೇ ಜೀವನ ಎನ್ನುವ ಕವಿವಾಣಿಗೆ ಇಂಬು ನೀಡಿದರು.

ಇಂದು (ಅ.3) ಮದ್ಯಾಹ್ನ 3 ರಿಂದ 4 ಗಂಟೆಯವರೆಗೆ ಭಾರತ್ ಸ್ಕೌಟ್ಸ್ –ಗೈಡ್ಸ್ ಮೈದಾನದಲ್ಲಿ ಆಯೋಜಿಸಿದ್ದ ‘ನಳದಮಯಂತಿ’ ಸ್ಪರ್ಧೆಯಲ್ಲಿ.  ರೀ.. ಸ್ವಲ್ಪ ರೊಟ್ಟಿ ನೋಡ್ಕೊಳ್ಳಿ, ನಾನು ಚಟ್ನಿ ಮಿಕ್ಸಿ ಮಾಡ್ಕೊಂಡು ಬರ್ತೀನಿ…. ಬೇಡ ನಾನೇ ಮಿಕ್ಸಿ ಮಾಡುತ್ತೀನಿ ನೀನು ಕ್ಲೀನ್ ಮಾಡು, ರೀ ಸ್ವಲ್ಪ ಈರುಳ್ಳಿ ಹೆಚ್ಚಿ, ಎಣ್ಣೆ ಹಾಕಿ, ಸುಡುತ್ತಾ ಇದೆ ನೋಡು… ಎನ್ನುವ ಸಂಭಾಷಣೆಗಳು ಎಲ್ಲಾ ಸ್ಪರ್ಧಿಗಳಲ್ಲಿ ಸಾಮಾನ್ಯವಾಗಿಯೇ ನಡೆದಿತು. ಎಂದೂ ಅಡುಗೆ ಮನೆ ಕಡೆ ತಲೆ ಹಾಕದವರು ಇಂದು ಸ್ಪರ್ಧೆಯಲ್ಲಿ ಹೆಂಡತಿ ಜೊತೆಗೂಡಿ ಸಹಾಯಕ್ಕೆ ಕೈ ಚಾಚಿ ನಿಂತು ನಿನ್ನೊಂದಿಗೆ ನಾನಿರುವೆ ಎನ್ನುವ ವಿಶ್ವಾಸವನ್ನು ಮೂಡಿಸಿದರು.

ತೀರ್ಪುಗಾರ್ತಿಯಾದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಆಹಾರ ವಿಜ್ಞಾನ ವಿಭಾಗದ ಡಾ.ಹೇಮಲತ ಸಿಟಿಟುಡೆಯೊಂದಿಗೆ ಮಾತನಾಡಿ ರಾಗಿ ಅತಿ ಪೌಷ್ಠಿಕ ಆಹಾರ, ನಾರಿನಂಶ ಹೇರಳವಾಗಿದೆ. ಹುಚ್ಚೆಳ್ಳು ನಮ್ಮ ಸಾಂಪ್ರದಾಯಿಕ ಧಾನ್ಯ ಆಂಟಿ ಆಕ್ಸಿಡೆಂಟ್ ಹೆಚ್ಚಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಮಕ್ಕಳಿಗೆ ಫಿಜಾ, ಬರ್ಗರ್ ಬದಲು ತರಕಾರಿ ಹಾಕಿ ರಾಗಿ ರೊಟ್ಟಿ ಮಾಡಿಕೊಡುವುದು ಅತಿ ಉಪಯುಕ್ತ ಎಂದರು.

ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಮಾತನಾಡಿ, ನಗರದಲ್ಲಿ ಪ್ಲಾಸ್ಟಿಕ್ ನಿರ್ಬಂಧಿಸಲಾಗಿದ್ದು ಆಹಾರ ಮೇಳದಲ್ಲಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಗಮನಕ್ಕೆ ಬಂದರೆ ದಂಡ ವಿಧಿಸಲಾಗುವುದು. ಮೇಳದಲ್ಲಿ ಶುಚ್ಚಿತ್ವಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದರು.

ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಕಿ ಸರಳ ನಾಯರ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರವಿಪ್ರಸನ್ನ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ದಂಪತಿಗಳಲ್ಲಿನ ಸಾಮರಸ್ಯ, ಹೊಂದಾಣಿಕೆ, ಶುಚಿತ್ವ ಹಾಗೂ ಪ್ರಸೆಂಟೆಷನ್  ಪರಿಗಣಿಸಿ ಅಂಕಗಳನ್ನು ನೀಡಿ ವಿಜೇತರನ್ನು ಆಯ್ಕೆ ಮಾಡಿದರು.

ಪ್ರಥಮ ಸ್ಥಾನ ಗಳಿಸಿದ ಮನೋಹರ್ ‘ಸಿಟಿಟುಡೆ’ಯೊಂದಿಗೆ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸಲು ಮೊದಲಿಗೆ ಮುಜುಗರವೆನಿಸಿತು. ಮನೆಯಲ್ಲಿ ಆಗಾಗ ಸಹಾಯ ಮಾಡುತ್ತಿದ್ದೆ ಇಂದು ಸಾರ್ವಜನಿಕವಾಗಿ ಅಡುಗೆ ಮಾಡಿ ನನ್ನಲ್ಲಿಯೂ ಆತ್ಮವಿಶ್ವಾಸ ಹೆಚ್ಚಿದೆ ಎಂದರು. ಆ ಸಮಯದಲ್ಲಿ ಪ್ರತಿಕ್ರಿಯಿಸಿದ ಹೆಂಡತಿ ಚೈತ್ರ ಇದೇ ಮೊದಲ ಭಾರಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರಶಸ್ತಿಯೂ ಲಭಿಸಿದ್ದು ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದರು.

ಮತ್ತೊಬ್ಬ ಸ್ಪರ್ಧಿ ಯೋಗೀಶ್ ಮಾತನಾಡಿ, ಭಾನುವಾರದಂದು ಮಾತ್ರ ಸ್ವಲ್ಪ ಸಹಾಯ ಮಾಡುತ್ತಿದ್ದೆ. ಪ್ರತಿ ದಿನ ಮಹಿಳೆಯರು ಸೀಮಿತ ಅವಧಿಯಲ್ಲಿ ಅದು ಹೇಗೆ ನಿಭಾಯಿಸುತ್ತಾರೆ ಎನ್ನುವ ಅನುಭವಾಯಿತು ಎಂದರು. ಒಟ್ಟು ಎಂಟು ಜನ ದಂಪತಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಯಾಂತ್ರಿಕ ಜೀವನದಲ್ಲಿ ಇಂತಹ ಸ್ಪರ್ಧೆಗಳು ಪ್ರತಿಯೊಬ್ಬರಿಗೂ ಬೇಕು. ಇದರಿಂದ ಮನರಂಜನೆಯೊಂದಿಗೆ ಮಾನಸಿಕ ಬದಲಾವಣೆ ಸಿಗುವುದು ಎನ್ನುವುದು ಬಹುತೇಕ ದಂಪತಿಗಳ ಅನಿಸಿಕೆಯಾಗಿತ್ತು. ಸೀಮಿತ ಅವಧಿಯಲ್ಲಿ ಕೆಲವು ದಂಪತಿಗಳು 6 ರಿಂದ 8 ರೊಟ್ಟಿ ತಯಾರಿಸಿದರು. ಇನ್ನು ಕೆಲವರು ನಾಲ್ಕು ರೊಟ್ಟಿಗೆ ಸುಸ್ತಾಗಿ ಉಸ್ಸ್ ಎಂದು ನಿಟ್ಟುಸಿರು ಬಿಟ್ಟರು. ಇಡೀ ವೇದಿಕೆಯೇ ರಾಗಿ ರೊಟ್ಟಿ ಹುಚ್ಚೆಳ್ಳ್ ಚಟ್ನಿಯಿಂದ ಸುಗಂಧದ ಘಮ ತುಂಬಿತ್ತು.

ನಳದಮಯಂತಿ ಸ್ಪರ್ಧೆಯಲ್ಲಿ ಮೈಸೂರಿನ ಚೈತ್ರ – ಮನೋಹರ್ ಪ್ರಥಮ,  ಕುವೆಂಪು ನಗರದ ಅನಿತಾ –ರಮೇಶ್ ದ್ವಿತೀಯ ಹಾಗೂ ರಮ್ಯಶ್ರೀ- ಯೋಗೇಶ್ ಗೆ ತೃತೀಯ ಸ್ಥಾನ ಪಡೆದರು. ಪ್ರಥಮ ಸ್ಥಾನ ಗಳಿಸಿದ ಜೋಡಿಗೆ ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ 2 ಸಾವಿರ ನಗದು ಮತ್ತು ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ ಆಹಾರ ಇಲಾಖೆಯಿಂದ ಕ್ರಮವಾಗಿ 1500 ಹಾಗೂ ಸಾವಿರ ರೂಗಳ ನಗದು, ಅಭಿನಂದನಾ ಪತ್ರ ಮತ್ತು ನೆನಪಿನ ಕಾಣಿಕೆ ವಿತರಿಸಲಾಯಿತು. ಆಹಾರ ಮೇಳ ಉಪಸಮಿತಿ ಕಾರ್ಯಾಧ್ಯಕ್ಷ ಡಾ.ಕಾ.ರಾಮೇಶ್ವರಪ್ಪ ನೇತೃತ್ವದಲ್ಲಿ ಸ್ಪರ್ಧೆ ಜರುಗಿತು.

ಚಿತ್ರದಲ್ಲಿ : ನಳದಮಯಂತಿ ಸ್ಪರ್ಧೆಯ ಪ್ರಥಮ ಸ್ಥಾನ ಗಳಿಸಿದ ಚೈತ್ರ ಮತ್ತು ರಮೇಶ್ ದಂಪತಿ.

 

 

Leave a Reply

comments

Related Articles

error: