ಕರ್ನಾಟಕಪ್ರಮುಖ ಸುದ್ದಿ

ರಾಜ್ಯದ ನೀರಾವರಿ ಇಲಾಖೆ ಅತಿ ಹೆಚ್ಚು ಭ್ರಷ್ಟವಾಗಿದೆ : ಯಡಿಯೂರಪ್ಪ ಗಂಭೀರ ಆರೋಪ

ಪ್ರಮುಖಸುದ್ದಿ,ರಾಜ್ಯ(ಹುಬ್ಬಳ್ಳಿ) ಮೇ.25:- ರಾಜ್ಯದ ನೀರಾವರಿ ಇಲಾಖೆ ಅತಿಹೆಚ್ಚು ಭ್ರಷ್ಟವಾಗಿದೆ. ಅಕ್ರಮವಾಗಿ ಜಿಂದಾಲ್ ಕಂಪನಿಗೆ ನೀರು ಬಿಟ್ಟಿದ್ದಾರೆ. ಸಚಿವ ಎಮ್.ಬಿ. ಪಾಟೀಲ್ ಅವ್ಯವಹಾರ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂ.ಬಿ.ಪಾಟೀಲ್ ವಿರುದ್ಧ ಹರಿಹಾಯ್ದರು.

ಹುಬ್ಬಳ್ಳಿಯಲ್ಲಿ ಜನಸಂಪರ್ಕ ಅಭಿಯಾನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ ನನ್ನ ಬಗ್ಗೆ ವಯಸ್ಸಾಗಿದೆ ಎಂದು ಹಗುರವಾಗಿ ಮಾತನಾಡಿದ್ದಾರೆ. ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ವಾಸ್ತವ ತಿಳಿಯಲು ಸಮಿತಿ ರಚಿಸಲಾಗಿದೆ. ಎಚ್.ಕೆ.ಪಾಟೀಲ್ ಊರಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಕುಡಿಯುವ ನೀರಿಗಾಗಿ ಹೋರಾಡಿದ ಬಿಜೆಪಿ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್ ಹಾಕಿದ್ದಾರೆ. ಹೋರಾಟ ಹತ್ತಿಕ್ಕಲು ಬಿಜೆಪಿ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್ ಹಾಕಿದ್ದಾರೆ.ಸರ್ಕಾರದ ದೌರ್ಜನ್ಯ ಖಂಡಿಸಿ, ಕುಡಿಯುವ ನೀರಿಗೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದರು.

ನಾಳೆ ಗದಗ್‌ನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಮಾಡುತ್ತೇವೆ. ರಾಜ್ಯ ಸರ್ಕಾರ ಹಗಲು ದರೋಡೆ ನಡೆಸಿದ್ದು, ತುಘಲಕ್ ದರ್ಬಾರ್ ಮಾಡುತ್ತಿದೆ ಎಂದು ತಿಳಿಸಿದರು. ಕುಮಾರಸ್ವಾಮಿ ಕುರಿತು ಪ್ರತಿಕ್ರಿಯಿಸಿದ ಅವರು                         ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರು ಹೀಗೇಕೆ ಮಾತನಾಡುತ್ತಾರೆ ಅರ್ಥವಾಗುತ್ತಿಲ್ಲ.ವೆಂಕಟೇಶ್ ಗೌಡ ಎಂಬಾತ ಐಟಿಗೆ ದೂರು ಕೊಟ್ಟಿದ್ದಾನೆ. ಬಿಜೆಪಿ ಕಚೇರಿಯಲ್ಲಿ ಪತ್ರ ಟೈಪ್ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರು ತಾವು ತಪ್ಪಿತಸ್ಥರಲ್ಲ ಎಂಬುದನ್ನು ಸಾಬೀತು ಮಾಡಲಿ. ಇಲ್ಲವೇ ಆರೋಪಿಸಿದವರ ವಿರುದ್ಧ ಕಾನೂನು ಹೋರಾಟ ಮಾಡಲಿ. ವೆಂಕಟೇಶ್ ಗೌಡ ನಮ್ಮವನು ಎಂದು ಕುಮಾರಸ್ವಾಮಿ ಸಾಬೀತು ಮಾಡಲಿ. ನಾನು ಅವರ ಮನೆಗೆ ಹೋಗಿ ಕ್ಷಮೆ ಕೇಳಲು ಸಿದ್ಧ. ಪ್ರಚಾರಕ್ಕಾಗಿ ಹಿಟ್ ಆಂಡ್ ರನ್ ಮಾಡುವುದು ಬೇಡ. ಹೋದಲ್ಲೆಲ್ಲ ಬಿಜೆಪಿಗೆ ದಲಿತರ ಅಪಾರ ಬೆಂಬಲ ಸಿಗುತ್ತಿದೆ ಎಂಬ ಕಾರಣಕ್ಕೆ. ಹೊಟ್ಟೆಕಿಚ್ವಿನಿಂದ ಕುಮಾರಸ್ವಾಮಿ ಮನಬಂದಂತೆ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ಅನುರಾಗ್ ತಿವಾರಿ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ  ಅವರಿಗೆ ನಾಲ್ಕು ತಿಂಗಳ ಸಂಬಳ ಕೊಟ್ಟಿಲ್ಲ.ತಿವಾರಿ ಅತ್ಯಂತ ಪ್ರಾಮಾಣಿಕ ಅಧಿಕಾರಿ. ತಿವಾರಿಯವರ ಸಾವಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೈತಿಕ ಹೊಣೆ ಹೊರಬೇಕು. ತಿವಾರಿ ಆಹಾರ ಇಲಾಖೆಯಲ್ಲಿನ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಬಯಲಿಗೆ ತರುತ್ತಿದ್ದರು. ಪ್ರಾಣ ಬೆದರಿಕೆ ಇದೆ ಎಂದು ಸಂಬಂಧಿಕರ ಬಳಿ ಹೇಳಿಕೊಂಡಿದ್ದರು.ಅನ್ನಭಾಗ್ಯ ಯೋಜನೆಯಲ್ಲಿ ಅಪಾರ ಲೂಟಿ ನಡೆದಿದೆ. ಪ್ರಾಮಾಣಿಕ ಅಧಿಕಾರಿಗಳಿಗೆ ರಾಜ್ಯದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ.ಇಬ್ಬರು ಐಎಎಸ್ ಅಧಿಕಾರಿಗಳು ನನ್ನ ಬಳಿ ಗೋಳು ತೋಡಿಕೊಂಡಿದ್ದಾರೆ ಎಂದರು. ರಾಜ್ಯದಲ್ಲಿ ಅಪಾರ ಪ್ರಮಾಣದ ತೆಂಗು, ಅಡಕೆ ಬೆಳೆ ಹಾನಿಯಾಗಿದೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ ತೆಂಗು ಅಡಕೆ ಬೆಳೆಗಾರರಿಗೆ ಪರಿಹಾರ ನೀಡಬೇಕು. ನಾವು ಅಧಿಕಾರಕ್ಕೆ ಬಂದು 24ಗಂಟೆಗಳಲ್ಲಿ ನೀರಾವರಿ ಇಲಾಖೆಯ ಹಗರಣಗಳ ತನಿಖೆ ಮಾಡುತ್ತೇವೆ. ನಮ್ಮ ಮೇಲೆ ಯಾವುದೇ ಆರೋಪಗಳಿದ್ದರೂ ರಾಜ್ಯ ಸರ್ಕಾರ ತನಿಖೆ ಮಾಡಿಸಲಿ.ಆದಷ್ಟು ಬೇಗ ರಾಜ್ಯ ಕಾಂಗ್ರೆಸ್ ಪಕ್ಷ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗಲಿ.ಸರ್ಕಾರ ಆದಷ್ಟು ಬೇಗ ಮನೆಗೆ ಹೋದಷ್ಟು ಜನರಿಗೆ ಒಳ್ಳೆಯದು. ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ 150ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ.ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇನೆ ಎಂದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: