ಮನರಂಜನೆಮೈಸೂರು

ಪತ್ತೇದಾರಿ ಕಥೆಯಾಧಾರಿತ ‘ಬಿಬಿ5′ ಚಿತ್ರ ಬಿಡುಗಡೆ

ಮೈಸೂರು.ಮೇ.25 : ವಿಭಿನ್ನ ಪ್ರಯೋಗದ ಪತ್ತೇದಾರಿ ಕಥೆಯಾಧಾರಿತ ‘ಬಿಬಿ5′ (ಮರ್ಮದ ಮಾರ್ಗ) ಚಲನಚಿತ್ರವನ್ನು ಮೈಸೂರಿನ ಡಿ ಆರ್ ಸಿ ಮತ್ತು ಐನಾಕ್ಸ್ ನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ನಾಯಕ ನಟ ಪೂರ್ಣಚಂದ್ರ ಮೈಸೂರು ತಿಳಿಸಿದರು.

ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಈಚೆಗೆ ಬೆಂಗಳೂರು ವಿವಿಯಲ್ಲಿ ನಡೆದ ಜೋಡಿ ಆತ್ಮಹತ್ಯೆ ಪ್ರಕರಣದ ಪತ್ತೇದಾರಿ ಕಥೆಯಾಧಾರಿತ ‘ಬಿಬಿ5’ ಚಿತ್ರ ಬಿಡುಗಡೆ ಹಾಗೂ ಪ್ರದರ್ಶನವನ್ನು ಮೇ 26ರ ಸಂಜೆ ಮಾಲ್ ಆಫ್ ಮೈಸೂರಿನ ಐನಾಕ್ಸ್ ಹಾಗೂ ಡಿಆರ್ ಸಿಯಲ್ಲಿ ಏರ್ಪಡಿಸಲಾಗಿದೆ ಎಂದು ಹೇಳಿದರು. ಚಿತ್ರದ ತಾರಾಗಣದಲ್ಲಿ ಚಂದನವನದ ಖ್ಯಾತ ನಟ ರಾಜೇಶ್, ನಾಯಕನಾಗಿ ಪೂರ್ಣಚಂದ್ರ ಮೈಸೂರು, ನಾಯಕಿ ನಟಿಯಾಗಿ ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್, ಹೊಸ ಮುಖಗಳಾಗಿ ಮೈಸೂರು ವಿದ್ಯಾವಿಕಾಸ ಇಂಜಿನಿಯರಿಂಗ್ ಕಾಲೇಜಿನ ನಿಧಿ ವಾದಿರಾಜ್ ಹಾಗೂ ಇತರರು ಪಾತ್ರ ನಿರ್ವಹಿಸಿದ್ದಾರೆ.  ಸೌಮ್ಯ ಡಿ.ಜಿ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು  ಜನಾರ್ಧನ್ ನಿರ್ದೇಶಿಸಿದ್ದರೆ, ಚೇತನ್ ಕುಮಾರ್ ಶಾಸ್ತ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ.  ಚಿತ್ರದಲ್ಲಿ 6  ಸುಮಧುರ ಹಾಡುಗಳಿವೆ. ವಿನೂತನ, ವಿಭಿನ್ನ, ರಹಸ್ಯ ಕುತೂಹಲ ಕಥೆಯಾಧಾರಿತ ಚಿತ್ರವಾಗಿ ಬಿಬಿ5 ಮೂಡಿದೆ. ಸ್ಥಳೀಯ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿ ಪಾತ್ರ ನಿರ್ವಹಿಸಿದ್ದು ಸುಮಾರು 26 ಲಕ್ಷ ರೂ.ಗಳು ಚಿತ್ರ ನಿರ್ಮಾಣಕ್ಕೆ ವೆಚ್ಚವಾಗಿದೆ ಎಂದು ತಿಳಿಸಿದರು.

ಚಲನಚಿತ್ರಗಳಲ್ಲಿ ಇತ್ತೀಚೆಗೆ ಹೊಸಬರಿಗೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ನಾಳೆ ಬಿಡುಗಡೆಯಾಗುವ ‘ಬಿಬಿ5’ಗೂ ಪ್ರೇಕ್ಷಕರು ಉತ್ತಮವಾಗಿ ಸ್ಪಂದಿಸುತ್ತಾರೆ ಎನ್ನುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು.  ಪ್ರೇಕ್ಷಕರ ಸ್ಪಂದನೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಚಿತ್ರವನ್ನು ರಾಜ್ಯದ ಇತರ ಥಿಯೇಟರ್ ಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಸಿನಿಮಾ ನೋಡಲು ರಂಗಿತರಂಗ ಚಿತ್ರ ತಂಡವೂ ಉತ್ಸುಕವಾಗಿದೆ ಎಂದು ತಿಳಿಸಿದರು.

ಚಿತ್ರತಂಡದ  ಶ್ರೀನಿಧಿ ವಾದಿರಾಜ್, ಶ್ರೀಕಾಂತ ಕಶ್ಯಪ್, ಶ್ರೀನಿಧಿ ವಶಿಷ್ಠಾ ಹಾಗೂ  ಛಾಯಾಗ್ರಾಹಕ ವಿಕ್ರಮ್  ಸುದ್ದಿಗೋಷ್ಠಿಯಲ್ಲಿ ಇದ್ದರು. (ವರದಿ: ಕೆ.ಎಂ.ಆರ್, ಎಲ್.ಜಿ)

Leave a Reply

comments

Related Articles

error: