ಮೈಸೂರು

ಪಾರಂಪರಿಕ ನಡಿಗೆಗೆ ಚಾಲನೆ: ಪಾರಂಪರಿಕ ಕಟ್ಟಡಗಳ ಕುರಿತು ಜಾಗೃತಿ

ಮೈಸೂರು ದಸರಾ ಪ್ರಯುಕ್ತ ಇಲ್ಲಿನ  ಪುರಭವನದ ಆವರಣದಲ್ಲಿ ಇತಿಹಾಸ ತಜ್ಞ ಈಚನೂರು ಕುಮಾರ್ ನೇತೃತ್ವದಲ್ಲಿ ಆಯೋಜಿಸಲಾದ ಪಾರಂಪರಿಕ ನಡಿಗೆಗೆ ಮಂಗಳವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.

ಜಿಲ್ಲಾಧಿಕಾರಿ ಡಿ.ರಂದೀಪ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪಾರಂಪರಿಕ ಕಟ್ಟಡಗಳ ಉಳಿವಿಗಾಗಿ ಈ ರೀತಿಯ ಕಾರ್ಯಕ್ರಮ ಅವಶ್ಯಕವಾಗಿದೆ. ದಸರಾ ಮುಗಿದ ಬಳಿಕ ವಿಶೇಷ ಸಭೆ ಕರೆದು ಮೈಸೂರಿನಾದ್ಯಂತ ಇರುವ ಪಾರಂಪರಿಕ ಕಟ್ಟಡಗಳ ಉಳಿವಿಗಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು. ದೇಶಾದ್ಯಂತ ತಿಳಿಸಲ್ಪಡುವ ಅನೇಕ ವಿಷಯಗಳು ಮೈಸೂರಿನಲ್ಲಿವೆ. ಇಲ್ಲಿ ಐತಿಹಾಸಿಕ ಮಾಹಿತಿ ನೀಡುವ ಸ್ಥಳಗಳೂ ಇವೆ. ಮೈಸೂರಿನ ಕುರಿತು ತಿಳಿದುಕೊಳ್ಳಲು ಬಹಳಷ್ಟಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಮಹತ್ವ ತಿಳಿಸಲಾಗುವುದು ಎಂದರು.

ಇತಿಹಾಸ ತಜ್ಞ ಈಚನೂರು ಕುಮಾರ್ ಮಾತನಾಡಿ ಐತಿಹಾಸಿಕ ಕಟ್ಟಡಗಳಾದ ಅರಮನೆ, ವಿಶ್ವವಿದ್ಯಾನಿಲಯ,  ಕಾ.ವಾ. ಸೇರಿದಂತೆ ಹಲವಾರು ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿದ್ದು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಅದಕ್ಕಾಗಿ ಪಾರಂಪರಿಕ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪಾರಂಪರಿಕ ನಡಿಗೆಯಲ್ಲಿ ವಿದೇಶಿಯರೂ ಸೇರಿದಂತೆ ಐನೂರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಈ ಸಂದರ್ಭ ಮನಪಾ ಆಯುಕ್ತ ಜಿ.ಜಗದೀಶ್, ಮೂಡಾ ಆಯುಕ್ತ ಎಂ.ಮಹೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: