ನಮ್ಮೂರುಮೈಸೂರು

ದಸರಾದಲ್ಲಿ ಪಾಲ್ಗೊಳ್ಳುವುದೇ ಹೆಮ್ಮೆಯ ವಿಷಯ: ನಟ ಶಿವರಾಜ್‍ಕುಮಾರ್

ಯುವ ದಸರಾ ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಯುವಕರ ಅಚ್ಚುಮೆಚ್ಚಿನ ಕಾರ್ಯಕ್ರಮ ಯುವ ದಸರಾಗೆ ಸ್ಯಾಂಡಲ್‌ವುಡ್ ಕಿಂಗ್ ಶಿವರಾಜ್‌ಕುಮಾರ್ ಚಾಲನೆ ನೀಡಿದರು.

ಬಳಿಕ ಮಾತನಾಡಿ, ದಸರಾಗೆ ಉದ್ಘಾಟನೆಗೆಂದು ಬಂದಿರುವುದು ತುಂಬಾ ಖುಷಿ ಕೊಟ್ಟಿದೆ. ಮೊದಲು ಕೇವಲ ಪ್ರೇಕ್ಷಕಬಾಗಿ ಬರುತ್ತಿದ್ದೆ. ವಿಶ್ವದಲ್ಲೇ ಖ್ಯಾತಿಗಳಿಸಿರುವ ದಸರಾದಲ್ಲಿ ಪಾಲ್ಗೊಳ್ಳುವುದೇ ಹೆಮ್ಮೆಯ ವಿಷಯ. ತಮಿಳುನಾಡು ಹಾಗೂ ಕರ್ನಾಟಕದ ವಿರುದ್ಧ ನಡೆಯುತ್ತಿರುವ ಕಾವೇರಿ ವಿವಾದದಿಂದ ದಸರಾ ರಂಗು ಕಡಿಮೆಯಾಗಿದೆ. ಈ ಜಲ ವಿವಾದ ಇಂದು ನಿನ್ನೆಯದಲ್ಲ. ತುಂಬಾ ವರ್ಷಗಳಿಂದ ನಡೆಯುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲ ಕಷ್ಟ ಕಾರ್ಪಣ್ಯಗಳು ತೊಳೆದು ಹೋಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದೇನೆ. ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಯುವಕರೇ ಇದ್ದು, ಎಲ್ಲ ಕ್ಷೇತ್ರಗಳಲ್ಲೂ ಮುಂದಕ್ಕೆ ಬರಬೇಕು. ಸಿನಿಮಾ ಕ್ಷೇತ್ರ ಮಾತ್ರವಲ್ಲದೆ, ರಾಜಕೀಯ ಕ್ಷೇತ್ರಕ್ಕೂ ಬಂದು ಬದಲಾವಣೆ ತರಬೇಕೆಂದರು.
ಟುವ್ವಿ ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ, ಬೇಡುವೆನು ವರವನ್ನು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಊರಿಂದ ಓಡಿ ಬಂದ ಜೋಗಿನ ಅಲ್ಲ ರೀ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದವರನ್ನು ಹುಚ್ಚೆದ್ದು ಕುಣಿಸಿದರಲ್ಲದೆ, ತಮ್ಮದೆ ಚಿತ್ರದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಯುವಕರ ದಸರಾಗೆ ಮತ್ತಷ್ಟು ಮೆರುಗು ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣವರ್, ಯುವ ದಸರಾ ಉಪಸಮಿತಿ ಕಾರ್ಯಾಧ್ಯಕ್ಷ ರಾಜೇಶ್, ಕಾರ್ಯದರ್ಶಿ ಸೋಮಶೇಖರ್, ವಿಶೇಷ ಸಲಹೆಗಾರ ನಟರಾಜ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Reply

comments

Related Articles

error: