ಮೈಸೂರು

ಕನ್ನಡಕ್ಕಾಗಿ ಹೋರಾಡುವವರು ಯಾರೂ ಇಲ್ಲ: ಹಿರಿಯ ಸಾಹಿತಿ ಪ್ರೊ.ಸಿ.ಪಿ. ಕೃಷ್ಣಕುಮಾರ್

ಕನ್ನಡಕ್ಕಾಗಿ ಹೋರಾಡುವವರು ಯಾರೂ ಇಲ್ಲ. ಕರ್ನಾಟಕದ ಏಕೀಕರಣ ಭೌಗೋಳಿಕವಾಗಿ  ಮಾತ್ರ ಆಗಿದೆ. ಕನ್ನಡದ ಬಗ್ಗೆ ಮಾನಸಿಕವಾಗಿ ಏಕೀಕರಣವಾದಾಗ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದು ಹಿರಿಯ ಸಾಹಿತಿ ಪ್ರೊ.ಸಿ.ಪಿ. ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.

ಸೋಮವಾರ ನಗರದ ರಾಜೇಂದ್ರ ಭವನದಲ್ಲಿ ಸಿರಿಗನ್ನಡ ವೇದಿಕೆ ಮತ್ತು ಸಿರಿಗನ್ನಡ ಮಹಿಳಾ ವೇದಿಕೆ ಆಯೋಜಿಸಿದ್ದ ರಾಜ್ಯ ಮಟ್ಟದ ದಸರಾ ಸಾಹಿತ್ಯ ಸಮ್ಮೆಳನದಲ್ಲಿ ಮಾತನಾಡಿದರು.

ಇಂದಿನ ಬರಹಗಾರರಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಮೇಲೆ ಉತ್ಹಾಹ ಇಲ್ಲವಾಗಿದೆ. ರಾಜಕಾರಣಿಗಳು ಅಧಿಕಾರದ ಬಗ್ಗೆ ಹೋರಾಡುತ್ತಾರೆಯೇ ವಿನಹ ಭಾಷೆಯ ಉಳಿವಿಗೆ ಚಿಂತಿಸದಿರುವುದು ವಿಷಾದನೀಯ ಎಂದರು.

ಅಲ್ಲಮ ಪ್ರಭು, ಕುವೆಂಪು, ಬಿಎಂಶ್ರೀ ಅಂತಹವರು ಕನ್ನಡದ ಬೆಳಕನ್ನು ಚೆಲ್ಲಿದ್ದರು. ಆದರೆ ಇಂದು ಆ ಬೆಳಕನ್ನು ಕತ್ತಲೆಯ ಕಾರ್ಮೋಡ ಕವಿದು, ಪರಭಾಷಾ ಪ್ರೇಮಕ್ಕೆ ತುತ್ತಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ಸಾಹಿತ್ಯ ಇಂದು ಮಾರಾಟದ ಸರಕಾಗಿ ಪರಿಣಮಿಸಿದೆ. ಮಾಧ್ಯಮಗಳನ್ನು ಭಾಷೆಗಳನ್ನು ಕೊಲ್ಲುತ್ತಿವೆ. ಮಾಧ್ಯಮದ ಮೂಲಕ ಅಭಿವೃದ್ಧಿ ಸಾಹಿತ್ಯ ಉಳಿಯಬೇಕು. ದೇಶ, ಭಾಷೆ, ಸಂಸ್ಕೃತಿಯನ್ನು ಕುರಿತು ಎಲ್ಲಾ ವರ್ಗದ ಜನರು ಚರ್ಚಿಸುವಂತಾಗಬೇಕು. ಸಂಸ್ಕೃತಿ ಅಳಿವಿಗೆ ಕಾರಣವಾಗಿರುವ ದುಷ್ಟಶಕ್ತಿಗಳ ವಿರುದ್ಧ ಸಾಮೂಹಿಕ ಹೋರಾಟ ಕೈಗೊಂಡಾಗ ಮಾತ್ರ ನಮ್ಮ ನೈಜ ಸಂಸ್ಕೃತಿ ಉಳಿಯುತ್ತದೆ ಎಂದು ತಿಳಿಸಿದರು.

ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಎಸ್. ವೆಂಕಟರಾಮಯ್ಯ, ಜಿಲ್ಲಾಧ್ಯಕ್ಷ ರಾಘವೇಂದ್ರ ಕುಮಾರ್, ಮಹಿಳಾ ರಾಷ್ಟ್ರಾಧ್ಯಕ್ಷೆ ನಾಗರತ್ನ, ಸೌಗಂದಿಕಾ, ಸಾಹಿತಿ ಬನ್ನೂರು ಕೆ.ರಾಜು, ಉಪಸ್ಥಿತರಿದ್ದರು.

 

 

Leave a Reply

comments

Related Articles

error: