ದೇಶಪ್ರಮುಖ ಸುದ್ದಿ

ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮುಂದಿನ ರಾಷ್ಟ್ರಪತಿ?

ದೇಶ (ಪ್ರಮುಖಸುದ್ದಿ) ನವದೆಹಲಿ/ಬೆಂಗಳೂರು, ಮೇ 25 : ಬಿಜೆಪಿಯ ಹಿರಿಯ ಮುಖಂಡ ಹಾಗೂ ಕೇಂದ್ರ ವಸತಿ ಮತ್ತು ಐಟಿ ಸಚಿವ ವೆಂಕಯ್ಯ ನಾಯ್ಡು ಅವರು ಭಾರತದ ಮುಂದಿನ ರಾಷ್ಟ್ರಪತಿ ಆಗಲಿದ್ದಾರೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.

ಉತ್ತರ ಭಾರತದ ಮೇಲೆ ಹಿಡಿತ ಸಾಧಿಸಿರುವ ಬಿಜೆಪಿ ದಕ್ಷಿಣದಲ್ಲಿ ಕರ್ನಾಟಕ ಬಿಟ್ಟರೆ ಬೇರ ರಾಜ್ಯಗಳ ಮೇಲೆ ಯಾವುದೇ ಹಿಡಿತ ಹೊಂದಿಲ್ಲ. ಹೀಗಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಯ ಜನಪ್ರಿಯತೆ ವೃದ್ಧಿಸಬೇಕಾದರೆ ಈ ಬಾರಿ ರಾಷ್ಟ್ರಪತಿ ಹುದ್ದೆಗೆ ದಕ್ಷಿಣ ಭಾರತದ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕು ಎಂಬ ಚಿಂತನೆ ಬಿಜೆಪಿ ವಲಯದಲ್ಲಿ ಕಳೆದ ಕೆಲವು ಸಮಯದಿಂದ ಚರ್ಚೆಯಲ್ಲಿತ್ತು.

ಇದಲ್ಲದೆ ಬಿಜೆಪಿ ಅಥವಾ ಎನ್‍ಡಿಎ ಅಭ್ಯರ್ಥಿ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಾದರೆ ದಕ್ಷಿಣದ ತೆಲಂಗಾಣ, ಆಂಧ್ರ, ತಮಿಳುನಾಡು ಸಂಸದರ ಬೆಂಬಲ ಅತ್ಯಗತ್ಯ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಗೆ ಅಥವಾ ಎನ್‍ಡಿಎಗೆ ನಿಕಟವಾಗಿರುವ ಪಕ್ಷಗಳ ಸಂಸದರಿದ್ದಾರೆ. ತೆಲಂಗಾಣದಲ್ಲಿ ಟಿಆರ್‍ಎಸ್‍, ಆಂಧ್ರದಲ್ಲಿ ಆಡಳಿತ ಪಕ್ಷ ತೆಲುಗು ದೇಸಂ, ವಿರೋಧ ಪಕ್ಷ ವೈಎಸ್‍ಆರ್‍ ಕಾಂಗ್ರೆಸ್‍, ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷಗಳು ಈಗಾಗಲೇ ಎನ್‍ಡಿಎ ಅಭ್ಯರ್ಥಿಗೆ ತಮ್ಮ ಬೆಂಬಲ ಸೂಚಿಸಿವೆ.

ಹೀಗಾಗಿ ಈ ಮೂರೂ ಪಕ್ಷಗಳಿಗೆ ಒಪ್ಪಿಗೆಯಾಗುವ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಅವಶ್ಯಕತೆ ಬಿಜೆಪಿಗೆ ಎದುರಾಗಿದ್ದು, ವೆಂಕಯ್ಯ ನಾಯ್ಡು ಅವರು ಈ ಎಲ್ಲ ಪಕ್ಷಗಳಿಗೆ ಒಪ್ಪಿಗೆಯಾಗಬಲ್ಲ ಅಭ್ಯರ್ಥಿ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬಂದಿದೆ. ಅವರೇ ಮುಂದಿನ ರಾಷ್ಟ್ರಪತಿಯಾಗಬಹುದು ಎಂದು ಬಲವಾದ ಅನಿಸಿಕೆಯನ್ನು ಬಿಜೆಪಿ ಮೂಲಗಳು ವ್ಯಕ್ತಪಡಿಸಿವೆ.

ನಾಯ್ಡು ರಾಜಕೀಯ ಹಾದಿ :

1949 ರ ಜುಲೈ 1 ರಂದು ಅವಿಭಜಿತ ಆಂಧ್ರದ ನೆಲ್ಲೂರ್ ಜಿಲ್ಲೆಯ ಚವಟಪಲೇಂನಲ್ಲಿ ಜನನ.  ಬಿಎ ಮತ್ತು ಎಲ್’ಎಲ್’ಬಿ ವ್ಯಾಸಂಗ ಮಾಡಿದ್ದಾರೆ. ಚಿಕ್ಕಂದಿನಿಂದಲೇ ಆರೆಸ್ಸೆಸ್ ಸ್ವಯಂಸೇವಕರು.  ಕಾಲೇಜು ದಿನಗಳಲ್ಲಿ ಎಬಿವಿಪಿ ಸಂಘಟನೆ ಸೇರ್ಪಡೆಯಾದ ನಾಯ್ಡು ಅವರು, ಆಂಧ್ರ ವಿವಿಯ ಕಾಲೇಜು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು.

1972ರಲ್ಲಿ ಆಂಧ್ರದಲ್ಲಿ ಜೋರು ಸದ್ದು ಮಾಡಿದ್ದ ಕಾಕನಿ ವೆಂಕಟರತ್ನಂ ನೇತೃತ್ವದಲ್ಲಿ “ಜೈ ಆಂಧ್ರ” ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ನಂತರ 1974 ರಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಡಲೆಂದು ತಯಾರಾದ ಜಯಪ್ರಕಾಶ್ ನಾರಾಯಣ್ ಛಾತ್ರಾ ಸಂಘರ್ಷ್ ಸಮಿತಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  1977 ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ವಾಸವನ್ನೂ ಅನುಭವಿಸಿದ್ದಾರೆ. 1978ರಲ್ಲಿ ವಿದ್ಯಾರ್ಥಿ ಮುಖಂಡ ನಾಯ್ಡು ಪೂರ್ಣಪ್ರಮಾಣದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು.

ಉದಯಗಿರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. 1983ರಲ್ಲಿ ಉದಯಗಿರಿ ಕ್ಷೇತ್ರದಿಂದಲೇ ಸತತ 2ನೇ ಬಾರಿ ಶಾಸಕರಾಗಿ ಆಯ್ಕೆ. 1988-93ರಲ್ಲಿ ಆಂಧ್ರಪ್ರದೇಶ ಬಿಜೆಪಿಯ ಅಧ್ಯಕ್ಷ. 1996-2000ದಿಂದ ಬಿಜೆಪಿ ರಾಷ್ಟ್ರೀಯ ವಕ್ತಾರರು. 1999ರಲ್ಲಿ ವಾಜಪೇಯಿ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ. 2002ರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹೀಗೆ ನಾಯ್ಡು ಸುದೀರ್ಘ ರಾಜಕೀಯ ಅನುಭವ ಹೊಂದಿದ್ದಾರೆ. ಅವರು ತೆಲುಗು, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ಪ್ರಸ್ತುತ ಕೇಂದ್ರ ವಸತಿ ಮತ್ತು ಐಟಿ ಸಚಿವರಾಗಿರುವ ವೆಂಕಯ್ಯ ನಾಯ್ಡು ಅವರು ರಾಷ್ಟ್ರಪತಿ ಸ್ಥಾನಕ್ಕೇರಿದರೆ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿರುವ ಸೌಭಾಗ್ಯ ಅವರದ್ದಾಗಲಿದೆ.

-ಎನ್.ಬಿ.ಎನ್.

Leave a Reply

comments

Related Articles

error: