ಮೈಸೂರು

ಒಂದೇ ದಿನ ಎರಡು ಮನೆಗಳಲ್ಲಿ ಕಳ್ಳರ ಕೈಚಳಕ: 2.27 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಮೈಸೂರಿನಲ್ಲಿ ಸರಗಳ್ಳತನ ಹೆಚ್ಚುತ್ತಿರುವಾಗಲೇ ಇದೀಗ ಕಳ್ಳರ ಗಮನ ಮನೆಗಳ ಮೇಲೆ ನೆಟ್ಟಿದ್ದು, ಯಾರೂ ಇಲ್ಲದ ಸಮಯ ನೋಡಿ ಮನೆಗಳನ್ನು ದೋಚುವ ಸಾಹಸಕ್ಕೆ ಕೈ ಹಾಕಿದ್ದಾರೆ.  ನಗರ ವ್ಯಾಪ್ತಿಗೆ ಸೇರಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆಯ ಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಸುಮಾರು 2.27ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ಎಗರಿಸುವಲ್ಲಿ ಯಶಸ್ವಿಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬಸವೇಶ್ವರ ನಗರದ ಗಿರೀಂದ್ರನಾಥ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಅವರು ಬೆಂಗಳೂರಿನಲ್ಲಿ ನಡೆದ ವಿವಾಹವೊಂದರಲ್ಲಿ ಪಾಲ್ಗೊಳ್ಳಲು ಶನಿವಾರ ಬೆಂಗಳೂರಿಗೆ  ತೆರಳಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇರದ ವೇಳೆ ಕಳ್ಳತನ ಕೃತ್ಯ ನಡೆದಿದ್ದು, ಮನೆಯ ಕಿಟಕಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಸುಮಾರು 2.40ಲಕ್ಷ ರೂ. ಮೌಲ್ಯದ 80ಗ್ರಾಂ ಚಿನ್ನಾಭರಣವನ್ನು ದೋಚಿದ್ದಾರೆ. ಅವರು ಮನೆಗೆ ಮರಳಿದಾಗ ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ಗಮನಿಸಿದ ಮನೆಯವರು ಕಪಾಟಿನ ಬಾಗಿಲು ತೆರದಾಗ ಕೃತ್ಯ ಬೆಳಕಿಗೆ ಬಂದಿದೆ.

ಅದೇ ಬಡಾವಣೆಯ ನಿವಾಸಿ ಪುಷ್ಟ ಎಂಬವರ ಮನೆಯಲ್ಲೂ ಅದೇ ದಿನ ಕಳ್ಳತನ ನಡೆದಿದೆ. ಶನಿವಾರ ಪುಷ್ಟ ಅವರು ತನ್ನ ತಂಗಿಯ ಮನೆಗೆ ತೆರಳಿದ್ದರು. ಅವರು ಭಾನುವಾರ ಮನೆಗೆ ವಾಪಸ್ಸಾಗುವಷ್ಟರಲ್ಲಿ ಮನೆಯ ಕಿಟಕಿ ಬಾಗಿಲು ಮುರಿದಿರುವುದು ಕಂಡು ಬಂತು. ಮನೆಯೊಳಕ್ಕೆ ಬಂದು ಪರಿಶೀಲಿಸಲಾಗಿ ಟಿವಿಯ ಮೇಲಿರಿಸಲಾದ 25ಗ್ರಾಂ ತೂಕದ ಚಿನ್ನದ ಒಡವೆ ಹಾಗೂ 7ಸಾವಿರ ರೂ. ನಗದನ್ನು ದೋಚಿರುವುದು ಬೆಳಕಿಗೆ ಬಂದಿದೆ. ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

comments

Related Articles

error: