ಪ್ರಮುಖ ಸುದ್ದಿಮೈಸೂರು

ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ: ಜೆ.ಎಸ್.ಎಸ್. ಆಸ್ಪತ್ರೆಯ ನೂತನ ಮೈಲಿಗಲ್ಲು

(ಪ್ರಮುಖ ಸುದ್ದಿ) ಮೈಸೂರು,ಮೇ 26 : ಹೃದಯದಲ್ಲಿ (ಲೆಫ್ಟ್ ಏಟ್ರಿಯಲ್ ಅಪೆಂಡೇಜ್) ಸಾಧನ ಅಳವಡಿಸಿ ಎಡ ಹೃತ್ಕರ್ಣದ ಕಂಪನದಿಂದ (ಏಟ್ರಿಯನ್ ಫಿಬ್ರಿಲೇಷನ್) ಉಂಟಾಗುವ ಪಾರ್ಶ್ವವಾಯುವನ್ನು ತಡೆಗಟ್ಟುವ ಅತ್ಯುತ್ತಮ ಚಿಕಿತ್ಸಾ ವಿಧಾನವನ್ನು ಜೆ.ಎಸ್.ಎಸ್.ಆಸ್ಪತ್ರೆಯ ಹೃದಯ ಕ್ಷೇಮ ತಂಡ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ರೋಗಿಗೆ ಪುನರ್ಜನ್ಮ ನೀಡಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ನಾಗರಾಜ ದೇಸಾಯಿ ಸಂತಸ ವ್ಯಕ್ತಪಡಿಸಿದರು.

ಶುಕ್ರವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇಸಾಯಿ ಅವರು, ತಾಂತ್ರಿಕ ನೈಪುಣ್ಯತೆ ಅಗತ್ಯತೆ ಹಾಗೂ ವಿಧಾನದ ವೆಚ್ಚದ ದೃಷ್ಟಿಯಿಂದ  ಪ್ರಕ್ರಿಯೆಯನ್ನು ಬಹಳ ವಿರಳವಾಗಿ ನಿರ್ವಹಿಸಲಾಗುತ್ತಿದ್ದು ಇದನ್ನು ಮೈಸೂರಿನಲ್ಲಿ ಇದೇ ಪ್ರಥಮ ಬಾರಿಗೆ ನಡೆಸಿದ ಹೆಗ್ಗಳಿಕೆಗೆ ಜೆ.ಎಸ್.ಎಸ್. ಆಸ್ಪತ್ರೆ ಪಾತ್ರವಾಗಿದೆ. ಇದೊಂದು ವಿರಳ ವಿಧಾನವಾಗಿದ್ದು ತಿಂಗಳಲ್ಲಿ ಕೇವಲ ಒಂದೆರಡು ಪ್ರಕರಣಗಳಷ್ಟೇ ರಾಜ್ಯದಲ್ಲಿ ನಡೆಯುತ್ತವೆ ಎಂದರು.

ಹೃತ್ಕರ್ಣದ ಕಂಪನದಿಂದ ರೋಗಿಗೆ ಅನಿಯಮಿತ ಮತ್ತು ತೀವ್ರ ತರವಾದ ಹೃದಯ ಬಡಿತ ಉಂಟಾಗುವುದು. ಹೃದಯದ ಮೇಲ್ಭಾಗ ಹಾಗೂ ಕೆಳ ಭಾಗದ ಕವಾಟಗಳ ಸಮನ್ವಯತೆ ಕೊರತೆ ಉಂಟಾಗುವುದು. ಆಗ ಎಡ ಹೃತ್ಕರ್ಣವು ರಕ್ತ ಹೊರಹಾಕಲು ವಿಫಲವಾಗಿ  ಲೆಫ್ಟ್ ಏಟ್ರಿಯಲ್ ಅಪೆಂಡೇಜ್ ನಲ್ಲಿ ರಕ್ತ ಹೆಪ್ಪುಗಟ್ಟಿ ಹೊರ ಹೋಗುವ ರಕ್ತದಲ್ಲಿ ಸೇರಿ ಮೆದುಳಿಗೆ ತಲುಪಿ ಪಾರ್ಶ್ವವಾಯು ಪ್ರಮಾಣ 5 ಪಟ್ಟು ಹೆಚ್ಚಾಗುತ್ತದೆ ಎಂದು ತಿಳಿಸಿದರು.  ಶೇ. 1-2 ರಷ್ಟು ಪ್ರಮಾಣದಲ್ಲಿ ಕಂಡು ಬರುವ ಈ ಪಾರ್ಶ್ವವಾಯು, ವಯೋವೃದ್ಧರಲ್ಲಿ ಶೇಕಡವಾರು ಪ್ರಮಾಣ ಹೆಚ್ಚಾಗಿದೆ. ಸಮಸ್ಯೆ ಪರಿಹಾರಕ್ಕೆ ಲೆಫ್ಟ್ ಏಟ್ರಿಯಲ್ ಅಪೆಂಡೇಜ್ ನಲ್ಲಿ ಹೆಪ್ಪು ಗಟ್ಟಿದ ರಕ್ತ ಸಂಗ್ರಹವಾಗುವುದರಿಂದ ಇದು ಪರಿಣಾಮಕಾರಿ ಶಸ್ತ್ರ ಚಿಕಿತ್ಸಾ ವಿಧಾನವಾಗಿದೆ ಎಂದು ತಿಳಿಸಿದರು.

ಡಾ.ಸುನಿಲ್ ಕುಮಾರ್ ಮಾತನಾಡಿ, ಲೆಫ್ಟ್ ಏಟ್ರಿಯಲ್ ಅಪೆಂಡೇಜ್ ಅನ್ನು ಮುಚ್ಚಲು ಸಾಮಾನ್ಯವಾಗಿ ಟಿಇಇ ಮಾರ್ಗದರ್ಶನದಲ್ಲಿ ಸಾಮಾನ್ಯ ಅರವಳಿಕೆಯ ನೆರವಿನೊಂದಿಗೆ ನಡೆಸಲಾಗುವುದು. ಈ ಸಾಧನವನ್ನು ಲೋಹದ ಕೊಳವೆಗೆ ಜೋಡಿಸಿ ರೋಗಿಯ ತೊಡೆಯ ರಕ್ತನಾಳದ ಮೂಲಕ ಹೃದಯಕ್ಕೆ ರವಾನಿಸಿ ನಿರ್ದಿಷ್ಟ ಸ್ಥಾನದ್ಲಲಿ ಶಾಶ್ವತವಾಗಿರುವಂತೆ ಅಳವಡಿಸಿ ಸಾಧನವನ್ನು ಬಿಡುಗಡೆಗೊಳಿಸಲಾಗುವುದು. ಇದೊಂದು ಸರಳ ವಿಧಾನವಾಗಿದ್ದು ರೋಗಿಯು ಮರುದಿನವೇ ಸಹಜ ಜೀವನ ನಡೆಸಬಹುದು ಎಂದು ತಿಳಿಸಿದರು.

ಶಸ್ತ್ರ ಚಿಕಿತ್ಸೆಗೊಳಗಾದ ಶಿರಸಿ ಮೂಲದ ಸುದರ್ಶನ್ ಲಕ್ಷ್ಮೀನಾರಾಯಣ ಮಂಗಳೂರು (71) ಅವರು, ಕಳೆದ 40 ವರ್ಷಗಳಿಂದಲೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದೆ, ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಆತಂಕ ಮೂಡುತ್ತಿತ್ತು. ಶಸ್ತ್ರ ಚಿಕಿತ್ಸೆಯಲ್ಲಿ ಸಾಧನ ಅಳವಡಿಸಿದ ನಂತರ ಸಹಜವಾಗಿ ಹಾಗೂ ಆರೋಗ್ಯಯುತ ಜೀವನ ನಡೆಸುತ್ತಿದ್ದೇನೆ.  ಔಷಧಿಗಿಂತಲೂ ಪರಿಣಾಮಕಾರಿಯಾಗಿದೆ, ಅಲ್ಲದೇ ಚಿಕಿತ್ಸೆಗೆ 3.92 ಲಕ್ಷ ರೂಪಾಯಿ ವೆಚ್ಚವಾಗಿದ್ದು, ವಿಮಾ ಕಂಪನಿಯೇ ಭರಿಸಿದ್ದರಿಂದ ನನ್ನ ಸ್ವಂತಕ್ಕೆ ಕೇವಲ 30 ಸಾವಿರ ರೂಪಾಯಿಗಳಷ್ಟೇ ವೆಚ್ಚವಾಯಿತು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹೃದಯ ಕ್ಷೇಮ ತಂಡದ ಡಾ.ಮಂಜಪ್ಪ, ಹೃದ್ರೋಗ ಅರವಳಿಕೆ ತಜ್ಞ ಡಾ.ದಿನೇಶ್, ಶಸ್ತ್ರ ಚಿಕಿತ್ಸಕ ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ, ಡಾ.ಸುಜಯ್ ಕೆ.ಆರ್. ಹಾಗೂ ಡಾ.ನಂಜಪ್ಪ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್,ಎಲ್.ಜಿ)

Leave a Reply

comments

Related Articles

error: