ಮೈಸೂರು

ಮಕ್ಕಳ ದಸರಾದಲ್ಲಿ ಮಿಂಚಿದ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅಮೋಘ, ಮಹೇಂದ್ರ

makkala-dasara-2-webಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಮಕ್ಕಳ ದಸರಾ ಕಾರ್ಯಕ್ರಮವನ್ನು ಬಾಲ ಪ್ರತಿಭೆಗಳಾದ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅಮೋಘ ಹಾಗೂ ಮಹೇಂದ್ರ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಪಂಚಾಯಿತಿ ಸಿಇಒ ಶಿವಶಂಕರ್‍ ಮಾತನಾಡಿ, ಪ್ರತಿಯೊಂದು ಮಕ್ಕಳಲ್ಲೂ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸುವ ಕೆಲಸ ಪೋಷಕರು ಹಾಗೂ ಶಿಕ್ಷಕರಿಂದಾಗಬೇಕು. ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅಮೋಘ ಹಾಗೂ ಮಹೇಂದ್ರ ಕೆಲದಿನಗಳ ಹಿಂದೆ ಯಾರಿಗೂ ಗೊತ್ತಿರಲಿಲ್ಲ. ಇಂದು ಅವರಲ್ಲಿರುವ ಪ್ರತಿಭೆ ಅವರನ್ನು ರಾಜ್ಯಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದೆ. ಇದರಂತೆಯೇ ಎಲ್ಲ ಮಕ್ಕಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಗೆಡವಿದಾಗ ಜಗತ್ತು ನಿಮ್ಮನ್ನು ಗುರುತಿಸುತ್ತದೆ ಎಂದು ಹೇಳಿದರು.

ಲೊಟ್ಟೆ ನ್ಯೂಸ್: ತನ್ನ ವಿಶಿಷ್ಟ ಪ್ರತಿಭೆ ಹಾಗೂ ಅಭಿನಯದಿಂದ ಎಲ್ಲರ ಮನೆ ಮಾತಾಗಿರುವ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮೈಸೂರಿನ ಮಹೇಂದ್ರನ ಲೊಟ್ಟೆ ನ್ಯೂಸ್ ಡೈಲಾಗ್ ನೆರೆದಿದ್ದವರೆಲ್ಲರನ್ನೂ ಬೆರೆಗುಗೊಳಿಸಿತು. ಟಿಆರ್‌ಪಿ ಇಂದ. ಟಿಆರ್‌ಪಿಗಾಗಿ ಟಿಆರ್‌ಪಿ ಗೋಸ್ಕರ ಇರುವ ಒನ್ ಅಂಡ್ ಓನ್ಲಿ ನ್ಯೂಸ್ ಚಾನಲ್ ಲೊಟ್ಟೆ ನ್ಯೂಸ್. ನಾನು ನಿಮ್ಮ ಕೃಷ್ಣ ಅಲಿಯಾಸ್ ಕೃಷ್ಣ ಪ್ರಸಾದ್ ಎಂದು ಡೈಲಾಗ್ ಹೊಡೆಯುತ್ತಿದ್ದಂತೆ ಸಭಾಂಗಣದ ತುಂಬೆಲ್ಲ ಕರತಾಡನ ಕೇಳಿಬಂದಿತ್ತು. ಡ್ರಾಮಾ ಜೂನಿಯರ್ಸ್‌ನ ಪಂಡರಿಬಾಯಿ ಎಂದೇ ಖ್ಯಾತಳಾದ ಅಮೋಘ ದೇಶಕ್ಕಾಗಿ ಹಾಗೂ ರಾಮನ ಪತ್ನಿಯಾಗಿ ಅಭಿನಯಿಸಿದ್ದ ಕೆಲ ದೃಶ್ಯಗಳನ್ನು ವೇದಿಕೆ ಮೇಲೆ ಅಭಿನಯಿಸಿದಳು.

ಕಾರ್ಯಕ್ರಮದಲ್ಲಿ ಮೈಸೂರು ತಾಲೂಕಿನ 9 ಶಿಕ್ಷಣ ಬ್ಲಾಕ್‌ಗಳಲ್ಲಿ ವಿವಿಧ ವಿಭಾಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಗಳಿಸಿದ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್, ಸಿಇಒ ಶಿವಶಂಕರ್, ಪಾಲಿಕೆ ಸದಸ್ಯ ಸುನಿಲ್, ಡಿಡಿಪಿಐ ಬಸಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಧಾ ಸೇರಿದಂತೆ ಇನ್ನಿತರರು ಹಾಜರಿದ್ದರು.

 

Leave a Reply

comments

Related Articles

error: