ಮೈಸೂರು

ಬೇಂದ್ರೆ ಮತ್ತು ಅಡಿಗರ ವಿಭಿನ್ನ ನೆಲೆಗಟ್ಟಿನ ನವೋದಯ ಕವಿಗಳು : ಡಾ.ಗುರುಪಾದ ಮರಿಗುದ್ದಿ ಅನಿಸಿಕೆ

ನಾಡು-ನುಡಿ ಹಾಗೂ ಸಂಶೋಧನ ಅಧ್ಯಯನ ದೃಷ್ಟಿಯಿಂದ ಬೇಂದ್ರೆ ಹಾಗೂ ಅಡಿಗರು ಸದಾ ಪ್ರಾಶಸ್ತ್ಯರು, ಸ್ವಾತಂತ್ರ್ಯ ಪೂರ್ವದಲ್ಲಿ ಬೇಂದ್ರೆ, ನಂತರ ಅಡಿಗರು ನವೋದಯ ಕಾವ್ಯಕ್ಕೆ ಹೊಸ ಮುನ್ನುಡಿ ಬರೆದರು ಎಂದು ಸಂಕೇಶ್ವರದ ವಿಶ್ರಾಂತ ಪ್ರಾಧ್ಯಾಪಕ ಡಾ.ಗುರುಪಾದ ಮರಿಗುದ್ದಿ ತಿಳಿಸಿದರು.

ಅವರು ಇಂದು (ಅ.4)ರ ಮಂಗಳವಾರದ ಬೆಳಿಗ್ಗೆ 10:30ಕ್ಕೆ ನಗರದ ಮಹಾರಾಜ ಕಾಲೇಜು ಜೂನಿಯರ್ ಸಭಾಂಗಣದಲ್ಲಿ ಕನ್ನಡ ವಿಭಾಗದಿಂದ ‘ಬೇಂದ್ರೆ ಮತ್ತು ಅಡಿಗರ ಕಾವ್ಯಾಭಿವ್ಯಕ್ತಿಯ ವಿಭಿನ್ನ ನೆಲೆಗಳು ವಿಷಯವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿ ವೈಯುಕ್ತಿಕ ಬದುಕಿನ ದುರಂತಗಳೇ ವರಕವಿ ಬೇಂದ್ರೆಯವರ ಬರಹಕ್ಕೆ ಪ್ರೇರಣೆ, ಸರಳ ಹಾಸ್ಯ ಪ್ರವೃತ್ತಿ ಗುಣಹೊಂದಿದ್ದರು ಜನತೆಯಿಂದ ದೂರ ಉಳಿದಿದ್ದವರು. ಮಾತೃ ಭಾಷೆ ಮರಾಠಿ, ಪರಿಸರ ಭಾಷೆ ಕನ್ನಡ ಎರಡು ಭಾಷೆಗಳಲ್ಲೂ ಅನುಪಂಥ ಹೊಂದಿದವರು, ಮೊದಲ ಕಾವ್ಯ ಸಂಕಲನ ಮರಾಠಿಯದ್ದೇ. ಜೀವನವನ್ನು ಅನುಭಾವ ದೃಶ್ಯದಿಂದ ಸಾಹಿತ್ಯಕ್ಕೆ ಅಳವಡಿಸಿಕೊಂಡವರು. ವಿ.ಕೃ.ಗೋಕಾಕ್ ಮತ್ತು ಮಧುರ ಚೆನ್ನರ ಒಡನಾಡಿಯಾಗಿದ್ದರು ಸಾಹಿತ್ಯಿಕವಾಗಿ ಭಿನ್ನತೆ ಇದೆ. ಅಲ್ಲಮಪ್ರಭು ಮೆಚ್ಚಿನ ಕವಿ, ಪ್ರಕೃತಿ-ಪುರುಷ ಸಂಬಂಧವನ್ನು ಸ್ತ್ರೀಶಕ್ತಿಗೆ ಹೋಲಿಸಿದವರು. ಗ್ರಾಮೀಣ ಜಾನಪದ ಸೊಗಡಿನ ಭಾಷೆಯೇ  ಬೇಂದ್ರೆಯವರ ಕಾವ್ಯದ ಜೀವಾಳ. ಕಾವ್ಯಗಳು ಮೇಲ್ನೋಟಕ್ಕೂ ಒಳಹೂರಣಕ್ಕೂ ವಿಭಿನ್ನ ಅರ್ಥ ನೀಡುವವು. ಕುವೆಂಪು ಕಾವ್ಯದ ಪ್ರಕೃತಿ-ಬೇಂದ್ರ ಕಾವ್ಯದ ಪ್ರಕೃತಿಗೂ ಸಂರ್ಪೂಣ ಭಿನ್ನ ಎಂದರು.

ನವ್ಯ ಕಾವ್ಯದ ಹರಿಕಾರ ಅಡಿಗರದು ‘ಕಟ್ಟುವೆವು ನಾವು’ ಪದವನ್ನು ಆರಂಭದಿಂದಲೇ ಅಂತ್ಯದವರೆಗೂ ಬಳಸಿ ನಾಡಿನ ಅಭಿಮಾನ ಮೆರೆದು ವಿಶ್ಲೇಷಣೆಗೆ ಓರೆ ಹಚ್ಚಿದವರು. ಇಂಗ್ಲಿಷ್ ಸಾಹಿತ್ಯದ ಅನುವಾದದಿಂದ ಕನ್ನಡಕ್ಕೆ ವಿಭಿನ್ನ ಮಜಲು ನೀಡಿದವರು. ಬೇಂದ್ರ-ಅಡಿಗರ ನಡುವೆ ತಲೆಮಾರುಗಳ ವ್ಯತ್ಯಾಸವಿದೆ. ಇಬ್ಬರ ಕಾವ್ಯ ದೃಷ್ಟಿಯಲ್ಲಿಯೂ ಅಂತರವಿದೆ. ಜೀವನ ಆಶಯಕ್ಕೆ ಒತ್ತು ನೀಡಿ ಮನುಷ್ಯ ಲೋಕವನ್ನು ಗಟ್ಟಿಗೊಳಿಸುವುದು ಅಡಿಗರ ಸಾಹಿತ್ಯದ ಮೂಲ ಆಶಯ. ಇವರಿಬ್ಬರು ಸಾಹಿತ್ಯ – ಭಾಷೆಯಲ್ಲಿ ಬೇರೆ ಬೇರೆ ದಿಕ್ಕಿನವರು ಎಂದು ತಿಳಿಸಿದರು.

ಮಂಗಳೂರು ವಿವಿಯ ಪ್ರೊ.ರಾಜಶೇಖರ ಹಳೆಮನೆ, ಮಂಡ್ಯದ ಪ್ರೊ.ಮ.ರಾಮಕೃಷ್ಣ, ಮಹಾರಾಣಿ ಕಾಲೇಜಿನ ಡಾ.ಸಂತೋಷ ಚೊಕ್ಕಾಡಿ, ಎಸ್.ಜೆ.ಗುರುರಾಜ, ಕಾಲೇಜು ಆಡಳಿತಾಧಿಕಾರಿ ಪ್ರೊ.ಸಿ.ಪಿ.ಸುನಿತಾ ಹಾಗೂ ಡಾ.ಡಿ.ವಿಜಯಲಕ್ಷ್ಮಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ.ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ‘ಯಾವ ಮೋಹನ’ ಅಡಿಗರ ಆಶಯ ಗೀತೆ ಸಹನಾ ಸುಶ್ರಾವ್ಯವಾಗಿ ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು  ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು.

 

 

 

 

 

 

 

Leave a Reply

comments

Related Articles

error: