ಮೈಸೂರು

ರೈತರು ಒಂದೇ ಕೃಷಿಗೆ ಅಂಟಿಕೊಳ್ಳದಿರಿ : ಕೆ.ನಾರಾಯಣ ಗೌಡ ಕರೆ

raitha-dasara-4-webರೈತರು ತಮ್ಮ ಕೃಷಿ ಭೂಮಿಯಲ್ಲಿ ಒಂದೇ ಬೆಳೆಗೆ ಅಂಟಿಕೊಳ್ಳದೇ ಮಿಶ್ರ ಬೆಳೆಯನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ಸಾಧನೆ ಮಾಡಿ ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಕೆ.ನಾರಾಯಣ ಗೌಡ ರೈತರಿಗೆ ಕರೆ ನೀಡಿದರು.

ಅವರು ಮೈಸೂರು ದಸರಾ ಉತ್ಸವ ಪ್ರಯುಕ್ತ ಜೆ.ಕೆ.ಗ್ರೌಂಡ್ ನಲ್ಲಿ ಮಂಗಳವಾರ ನಡೆದ ರೈತ ದಸರಾ ಉತ್ಸವದಲ್ಲಿ ಪಾಲ್ಗೊಂಡು ರೈತರನ್ನು ಸನ್ಮಾನಿಸಿ ಮಾತನಾಡಿದರು. ಒಂದೇ ಬೆಳೆ ಬೆಳೆಯುವುದರಿಂದ ಪ್ರಯೋಜನವಿಲ್ಲ. ರೈತರು ಮಿಶ್ರ ಕೃಷಿಗೆ ಆದ್ಯತೆ ನೀಡಬೇಕು. ಹಿಂದಿನ ಕಾಲದಲ್ಲಿ ಮಳೆ ಚೆನ್ನಾಗಿ ಬರುತ್ತಿತ್ತು. ಒಂದೇ ಕೃಷಿಯನ್ನು ಉತ್ತಮವಾಗಿ ಬೆಳೆಯಬಹುದಿತ್ತು. ಆದರೆ ಇಂದು ನಾವು ಮುಂಗಾರಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ಬೆಳೆಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.

ರೈತರು ತಮಗೆ 10 ಎಕ್ರೆ ಜಾಗವಿದ್ದರೆ ಅದರಲ್ಲಿ ಕೇವಲ ಕಬ್ಬಿನ ಬೆಳೆ ತೆಗೆಯುವ ಕುರಿತು ಯೋಚಿಸದೇ ಮೀನು, ಕುರಿ ಹೀಗೆ ಮಿಶ್ರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಚಿಂತನೆ ನಡೆಸಿ. ಆತ್ಮಹತ್ಯೆಯೊಂದೇ ಮಾರ್ಗವಲ್ಲ. ಅದನ್ನು ಬಿಟ್ಟು ಬದುಕಿ ಸಾಧಿಸಿ ತೋರಿಸುತ್ತೀನಿ ಎನ್ನುವ ಪಣ ತೊಡಿ. ಸರ್ಕಾರ ನೀಡುವ ಸೌಲಭ್ಯಗಳೆಲ್ಲವನ್ನೂ ಸದುಪಯೋಗಪಡಿಸಿಕೊಳ್ಳಿ. ತಜ್ಞರು ನಿಮ್ಮ ಕೃಷಿ ಪ್ರದೇಶಕ್ಕಾಗಮಿಸಿ ಮಣ್ಣಿನ ಗುಣ ತಿಳಿದು ಯಾವ ಬೆಳೆ ಬೆಳೆದರೆ ಉತ್ತಮ ಎನ್ನುವುದನ್ನು ತಿಳಿಸುತ್ತಾರೆ ಅವೆಲ್ಲದರ ಪ್ರಯೋಜನ ಪಡೆಯಿರಿ. ಮುಂದಿನ ಬಾರಿಯ ದಸರಾದಲ್ಲಿ ಇನ್ನೂ ಹೆಚ್ಚಿನ ಮಂದಿ ರೈತರು ಪ್ರಶಸ್ತಿ ಪಡೆಯುವಂತಾಗಬೇಕು ಎಂದರು.

ವೇದಿಕೆಯಲ್ಲಿ ಸಾವಯವ, ಮಿಶ್ರ, ಪ್ರಗತಿಪರ ಕೃಷಿಯಲ್ಲಿ ತೊಡಗಿಸಿಕೊಂಡು ಸಾಧನೆಗೈದ 20ಕ್ಕೂ ಅಧಿಕ ರೈತರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದಮೂರ್ತಿ, ತಾಲೂಕು ಪಂಚಾಯತ್ ಅದ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎಂ.ಡಿ.ಮಂಜು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕೋಟೆ ಆಂಜನೇಯ ದೇವಳದ ಬಳಿ ನಡೆದ ಜಾಥಾಕ್ಕೆ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಚಾಲನೆ ನೀಡಿದರು. ಜಾಥಾದಲ್ಲಿ ಎತ್ತಿ ಗಾಡಿ, ಕುರಿಗಳು ಸೇರಿದಂತೆ ಕೃಷಿಗೆ ಸಂಬಂಧಪಟ್ಟ ಪರಿಕರಗಳಿತ್ತು.

Leave a Reply

comments

Related Articles

error: