ಮೈಸೂರು

ಪೊಲೀಸ್‍ ಸಹಾಯ ಕೇಂದ್ರವೆಂಬ ವ್ಯರ್ಥ ಯೋಜನೆ

ವಿಶ್ವವಿಖ್ಯಾತ ಮೈಸೂರು ದಸರಾ ನಾಡಹಬ್ಬ ಕರ್ನಾಟಕದಲ್ಲಿ ನಡೆಯುವ ಬಹು ದೊಡ್ಡ ಆಚರಣೆಗಳಲ್ಲಿ ಒಂದಾಗಿದೆ. ಹೀಗಿದ್ದರೂ ಸರಕಾರ ಮಾತ್ರ ದಸರಾ ಆರಂಭಕ್ಕೆ ಒಂದು ವಾರವಿದೆ ಎಂದಾಗ ಕಾರ್ಯಕ್ರಮ ಆಯೋಜನೆ ಆರಂಭಿಸುತ್ತದೆ. ಇದು ಹೊಸ ಕತೆಯೇನಲ್ಲ. ಪ್ರತಿ ವರ್ಷನೂ ಅವ್ಯವಸ್ಥೆಗಳ ನಡುವೆಯೇ ದಸರಾ ಮುಗಿದು ಹೋಗುತ್ತದೆ.

ದಸರಾ ಆಚರಣೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸದೆ, ಅನಾವಶ್ಯಕ ಯೋಜನೆಗಳಿಗೆ ದುಡ್ಡು ಸುರಿಯುವುದನ್ನು ಮಾತ್ರ ದಸರಾ ಆಯೋಜನಾ ಸಮಿತಿ ನಿಲ್ಲಿಸಿಲ್ಲ. ಮೈಸೂರು ನಗರ ಪೊಲೀಸರ ಜನಸ್ನೇಹಿ ಪೊಲೀಸ್ ಅಭಿಯಾನ ಕೂಡ ಇದರಲ್ಲೊಂದು. ಈ ಅಭಿಯಾನದಲ್ಲಿ ನಗರದ ಹಲವೆಡೆ ಪೊಲೀಸ್ ಮಾಹಿತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ, ಈ ಯೋಜನೆಯೂ ಬಹುತೇಕ ನೀರಿನಲ್ಲಿ ಮಾಡಿದ ಹೋಮದ ರೀತಿಯಾಗಿದೆ.

ಮೈಸೂರಿನ ಹಲವೆಡೆ 18ಕ್ಕೂ ಹೆಚ್ಚು ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿ ಕೇಂದ್ರಗಳಲ್ಲೂ ಓರ್ವ ಪೊಲೀಸ್‍ ಸಿಬ್ಬಂದಿ ಮತ್ತು ಹೋಮ್‍ಗಾರ್ಡ್ಸ್ ಅಥವಾ ವಿದ್ಯಾರ್ಥಿಗಳು ಕುಳಿತಿರುತ್ತಾರೆ. ದಿನದ ಬಹುತೇಕ ಸಮಯ ಅವರಿಗೆ ಏನೂ ಕೆಲಸವಿರಲ್ಲ. ತಂತ್ರಜ್ಞಾನ ಅವಲಂಬಿಸಿ ಬದುಕುತ್ತಿರುವ ಈ ಕಾಲದಲ್ಲಿ ಮಾಹಿತಿ ಕೇಂದ್ರಗಳು ನಿಷ್ಪ್ರಯೋಜಕ ಎಂದೇ ಹೇಳಬಹುದು. ದಿನದಲ್ಲಿ ಇಬ್ಬರೋ ಮೂವರೋ ಬಂದು ಮಾಹಿತಿ ಕೇಳುವುದಕ್ಕಾಗಿ ಪೊಲೀಸರು ಇಡೀ ದಿನ ಕೇಂದ್ರದಲ್ಲಿ ನೊಣ ಹೊಡೆಯುತ್ತಾ ಕೂತಿರುತ್ತಾರೆ..!

ಇನ್ನು, ನೀವು ಕೇಂದ್ರಕ್ಕೆ ಹೋಗಿ ಕೇಳಿದರೆ ನಿಮಗೆ ದಾರಿ, ದಸರಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಸುರಕ್ಷತೆ ಸೂಚನೆಗಳ ಬಗ್ಗೆ ಕರಪತ್ರವೊಂದನ್ನು ನಿಮ್ಮ ಕೈಗೆ ನೀಡುತ್ತಾರೆ. ಯಾರಾದರೂ ಉಪದೇಶ ಹೇಳಿದಾಗಲೇ ಕೇಳುವ ತಾಳ್ಮೆಯಿಲ್ಲದ ಜನ, ಈ ಕರಪತ್ರದಲ್ಲಿರುವ ಉಪದೇಶಗಳನ್ನು ಓದುತ್ತಾರೆಯೇ? ಈ ಕರಪತ್ರಗಳನ್ನು ಹಂಚಲು ಒಂದೊಂದು ಕೇಂದ್ರದಲ್ಲಿ ಪೊಲೀಸರ ನಿಯೋಜನೆಯ ಅಗತ್ಯವಾದರೂ ಏನು?

ಈ ಬಗ್ಗೆ ಮೈಸೂರು ಪೊಲೀಸ್ ಕಮಿಷನರ್‍ ದಯಾನಂದ್ ಅವರನ್ನು ಕೇಳಿದಾಗ, “ಜನರಿಗೆ ಮಾಹಿತಿ ನೀಡುವ ಸಲುವಾಗಿ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿ ಮತ್ತು ಒಬ್ಬ ಪೊಲೀಸ್ ಸಿಬ್ಬಂದಿ ಪ್ರತಿ ಕೇಂದ್ರದಲ್ಲಿದ್ದಾರೆ. ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಮತ್ತು ದಾರಿ ಬಗ್ಗೆ ಮಾಹಿತಿ ನೀಡುತ್ತಾರೆ. ಇಲ್ಲಿ ಯಾವುದೇ ದೂರು ನೀಡಲು ಅವಕಾಶವಿಲ್ಲ. ಜನರು ಕೇಂದ್ರಗಳಿಗೆ ಬಂದು ಮಾಹಿತಿ ಪಡೆಯುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ನಗರ ಬಸ್‍ ನಿಲ್ದಾಣದ ಬಳಿ ಕೆಲ ದೇಶಿ ಮತ್ತು ವಿದೇಶಿ ಪ್ರಯಾಣಿಕರನ್ನು ಮಾತನಾಡಿಸಿದಾಗ, ಮಾಹಿತಿ ಕೇಂದ್ರಗಳು ಎಲ್ಲಿವೆ ಇವೆ ಎಂದು ನಮಗೆ ತಿಳಿದಿಲ್ಲ. ಇದರ ಬದಲು ಆನ್‍ಲೈನ್‍ನಲ್ಲೇನಾದರೂ ಮಾಹಿತಿ ನೀಡುವ ಯೋಜನೆ ಇದ್ದರೆ ಒಳ್ಳೆಯದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೇರೇನು ಮಾಡಬಹುದಿತ್ತು?

ನಗರದ ಪ್ರಮುಖ ಭಾಗಗಳಲ್ಲಿ ಬ್ಯಾನರ್‍ಗಳನ್ನು ಹಾಕಬಹುದು.

ಕಾರ್ಯಕ್ರಮಗಳ ವಿವರ, ರಸ್ತೆ ಮಾರ್ಗಗಳ ಮಾಹಿತಿಯನ್ನು ಬ್ಯಾನರ್‍ನಲ್ಲಿ ನಮೂದಿಸಬಹುದು.

ಮೊಬೈಲ್‍ ಆ್ಯಪ್‍ ಅಥವಾ ನಗರ ಪೊಲೀಸ್‍ ವೆಬ್ ಪೇಜ್‍ನಲ್ಲಿ ಮಾಹಿತಿ ನೀಡಬಹುದು.

ಕೇಂದ್ರದಲ್ಲಿ ಯಾವುದೇ ದೂರು ನೀಡಲು ಅವಕಾಶವಿಲ್ಲ ಅಂದ ಮೇಲೆ ಕೇಂದ್ರಗಳಲ್ಲಿ ಪೊಲೀಸರ ಅಗತ್ಯವಿಲ್ಲ. ದಸರಾ ಸಮಯದಲ್ಲಿ ಪೊಲೀಸರ ಅವಶ್ಯಕತೆ ಬಹಳವಿದ್ದು, ಮಾಹಿತಿ ಕೇಂದ್ರಗಳಲ್ಲಿ ಪೊಲೀಸರನ್ನು ಕೂರಿಸುವ ಬದಲು ಬೇರೆಲ್ಲಾದರೂ ನಿಯೋಜಿಸಬಹುದು. ಯಾವುದಕ್ಕೂ ದಸರಾ ಆರಂಭಕ್ಕೂ ಮೊದಲೇ ಪೂರ್ವ ಸಿದ್ಧತೆ ಮುಖ್ಯ.

ಸಂಧ್ಯಾ ಎನ್.ಎ.

 

 

 

 

Leave a Reply

comments

Related Articles

error: