
ಕರ್ನಾಟಕ
ರಾಜ್ಯದ ಒಂದು ಸಾವಿರ ಪೌರಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯ: ಎಂ.ಆರ್.ವೆಂಕಟೇಶ್
ಮಡಿಕೇರಿ, ಮೇ.26:-ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಪ್ರಸಕ್ತ ವರ್ಷ ರಾಜ್ಯದ ಒಂದು ಸಾವಿರ ಪೌರಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯವನ್ನು ಕಲ್ಪಿಸಿದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ರಾಜ್ಯ ಅಧ್ಯಕ್ಷರಾದ ಎಂ.ಆರ್.ವೆಂಕಟೇಶ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ಮಹಾನಗರ ಪಾಲಿಕೆಯಿಂದ 6 ಮಂದಿ, ನಗರಸಭೆಯಿಂದ 4 ಮಂದಿ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಂದ ತಲಾ ಮೂವರನ್ನು ಸಿಂಗಾಪುರ ಪ್ರವಾಸಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ಸಂಬಂಧ ಪಾಸ್ಪೋರ್ಟ್ ಸಿದ್ಧವಾಗುತ್ತಿದೆ ಎಂದು ಆಯೋಗದ ಅಧ್ಯಕ್ಷರು ಮಾಹಿತಿ ನೀಡಿದರು.
ಇಡೀ ನಗರ, ಪಟ್ಟಣವನ್ನು ಶುಚಿಗೊಳಿಸುವ ಪೌರಕಾರ್ಮಿಕರ ಬದುಕು ಉತ್ತಮ ಪಡಿಸುವ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ, ಬೆಳಗಿನ ಉಪಹಾರ ಯೋಜನೆ, ಆರೋಗ್ಯ ಭದ್ರತೆಗಾಗಿ ಜ್ಯೋತಿ ಸಂಜೀವಿನಿ, ಪೌರಕಾರ್ಮಿಕರ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯುವಂತಾಗಲು ಪ್ರತಿಷ್ಠಿತ ಶಾಲೆಗಳಿಗೆ ಉಚಿತ ಪ್ರವೇಶ, ಮದುವೆ ಹಾಗೂ ಸಭೆ ಸಮಾರಂಭಗಳಿಗೆ ಅನುಕೂಲವಾಗಲು ಸಮುದಾಯ ಭವನ ಹೀಗೆ ಪೌರ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ಅವರು ತಿಳಿಸಿದರು.
ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುರಕ್ಷಿತ ಪರಿಕರಗಳನ್ನು ನೀಡಬೇಕು, ಪೊಲೀಸರು ಹೇಗೆ ತಮ್ಮ ಕರ್ತವ್ಯ ಸಂದರ್ಭದಲ್ಲಿ ಟೋಪಿ, ಬೂಟು, ಉಪಯೋಗಿಸುತ್ತಾರೋ ಅದೇ ರೀತಿ ಪೌರಕಾರ್ಮಿಕರು ಸಹ ಗಂಬೂಟು, ಗ್ಲೌಸ್ ಮತ್ತಿತರ ಸುರಕ್ಷಿತ ಪರಿಕರಗಳನ್ನು ಉಪಯೋಗಿಸಿ ಕರ್ತವ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಅವರನ್ನು ಅನಾರೋಗ್ಯಕ್ಕೆ ದೂಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಧಿಕಾರಿಗಳು ಸಮಾಜದ ಕಟ್ಟಕಡೆಯ ಜನರ ಜೀವನ ಮಟ್ಟ ಸುಧಾರಣೆಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು. ಆ ನಿಟ್ಟಿನಲ್ಲಿ ಪೌರಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ಇರಬೇಕು ಎಂದು ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿ.ಪಂ.ಸಿಇಓ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಸಫಾಯಿ ಕರ್ಮಚಾರಿ ಆಯೋಗದ ಉಪ ನಿರ್ದೇಶಕರಾದ ಮಂಜುನಾಥ್, ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕರಾದ ಮಹಮ್ಮದ್ ಮುನೀರ್, ಪೌರಾಯುಕ್ತರಾದ ಬಿ.ಶುಭ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಾಯಾದೇವಿ ಗಲಗಲಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಕೃಷ್ಣ ಪ್ರಸಾದ್, ಶ್ರೀಧರ ಇತರರು ತಮ್ಮ ಇಲಾಖಾ ವ್ಯಾಪ್ತಿಯ ಮಾಹಿತಿ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ, ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಗೋಕುಲ ನಾರಾಯಣಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಕುಮಾರ, ಬಿ.ಸಿ.ಎಂ. ಇಲಾಖೆ ಅಧಿಕಾರಿ ಕೆ.ವಿ.ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಮ್ತಾಜ್, ರಘು ಇತರರು ಇದ್ದರು.(ವರದಿ:ಕೆಸಿಐ,ಎಲ್.ಜಿ)