ಮೈಸೂರು

ಕುಡಿಯುವ ನೀರು ವಿತರಣೆ

ದಸರಾ ಸಮಯದಲ್ಲಿ ಮೈಸೂರನ್ನು ಕಣ್ತುಂಬಿಕೊಳ್ಳಲು ನಗರಕ್ಕೆ ಆಗಮಿಸುವ ಪ್ರವಾಸಿಗರ ಬಾಯಾರಿಕೆ ನೀಗಿಸುವ ಸಲುವಾಗಿ ಮೈಸೂರು ಕನ್ನಡ ವೇದಿಕೆ ವತಿಯಿಂದ ನಗರದ ಕೆ.ಆರ್. ವೃತ್ತದಲ್ಲಿ ಕುಡಿಯುವ ನೀರನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಸಾಹಿತಿ ಬನ್ನೂರು ಕೆ.ರಾಜು, ದಾನಗಳಲ್ಲೇ ಶ್ರೇಷ್ಠವಾದದ್ದು ಅನ್ನದಾನ, ಕನ್ಯಾದಾನ, ವಿದ್ಯಾದಾನ ಎಂಬ ಮಾತಿತ್ತು. ಆದರೆ, ಇಂದು ಆ ಕಾಲ ಬದಲಾಗಿ ದಾನದಾನಗಳಲ್ಲೇ ಶ್ರೇಷ್ಠವಾದ ದಾನ ಕುಡಿಯುವ ನೀರಿನ ದಾನ ಎಂಬಂತಾಗಿದೆ. ಈ ಬಾರಿ ರಾಜ್ಯದೆಲ್ಲೆಡೆ ಸೂಕ್ತ ಸಮಯಕ್ಕೆ ಸರಿಯಾದ ಮಳೆಯಾಗದೆ ಎಲ್ಲೆಡೆಯೂ ಬರದ ಛಾಯೆ ಆವರಿಸಿದೆ. ಕುಡಿಯುವ ನೀರಿಗೂ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಮೈಸೂರು ಕನ್ನಡ ವೇದಿಕೆ ಕುಡಿಯುವ ನೀರನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

ಬಳಿಕ ಮಾತನಾಡಿದ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಮೈಸೂರು, ಮಂಡ್ಯ ಹಾಗೂ ಬೆಂಗಳೂರಿಗೆ ನೀರುಣಿಸುತ್ತಿದ್ದ ಕಾವೇರಿ ಈ ಬಾರಿ ಬತ್ತಿ ಹೋಗಿದ್ದು ಕುಡಿಯಲು ನೀರಿಲ್ಲದ ಸಂಕಷ್ಟದ ಸ್ಥಿತಿ ಒದಗಿ ಬಂದಿದೆ. ಇಂತಹ ಸಂದರ್ಭದಲ್ಲಿ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ  ಕುಡಿಯುವ ನೀರಿನ ಸಮಸ್ಯೆಯಾಗದಿರಲಿ ಎಂದು ನೀರನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾಹಿತಿ ಡಿ.ಎನ್.ಕೃಷ್ಣಮೂರ್ತಿ, ಸಮಾಜ ಸೇವಕ ರಘುರಾಂ, ಹರೀಶ್‌ಗೌಡ, ಹೊಮ್ಮ ಮಂಜುನಾಥ್, ರಾಧಾಕೃಷ್ಣ, ಉತ್ತನಹಳ್ಳಿ ಮಹದೇವು, ಮೆಡಿಕಲ್ ಮಹೇಶ್, ದೊರೆಸ್ವಾಮಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Reply

comments

Related Articles

error: